dcsimg
Image of garden asparagus
Creatures » » Plants » » Dicotyledons » » Asparagus Family »

Garden Asparagus

Asparagus officinalis L.

ಶತಾವರಿ ( Kannada )

provided by wikipedia emerging languages

ಆಸ್ಪ್ಯಾರಗಸ್‌ ಅಫಿಷಿನಾಲಿಸ್‌ ಎಂಬುದು ಆಸ್ಪ್ಯಾರಗಸ್‌ ಕುಲದಲ್ಲಿನ ಒಂದು ಹೂಬಿಡುವ ಸಸ್ಯಜಾತಿಯಾಗಿದ್ದು, ಶತಾವರಿ ಎಂದು ಹೆಸರಾಗಿರುವ ತರಕಾರಿಯನ್ನು ಅದರಿಂದ ಪಡೆಯಲಾಗುತ್ತದೆ. ಇದು ಯುರೋಪ್, ಉತ್ತರ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾದ ಬಹುತೇಕ ಭಾಗಗಳ ಸ್ಥಳೀಯ ಸಸ್ಯವಾಗಿದೆ.[೧][೨][೩] ಇದನ್ನು ಒಂದು ತರಕಾರಿ ಬೆಳೆಯಂತೆಯೂ ಈಗ ವ್ಯಾಪಕವಾಗಿ ಬೆಳೆಯಲಾಗುತ್ತಿದೆ.[೪]

ಜೀವವಿಜ್ಞಾನ

ಶತಾವರಿಯು ಒಂದು ಮೂಲಿಕೆಯಂಥ ಬಹುವಾರ್ಷಿಕ ಸಸ್ಯವಾಗಿದ್ದು ಸುಮಾರು ೧೦೦ ರಿಂದ ೧೫೦ ಸೆ.ಮೀ.ಎತ್ತರ ಬೆಳೆಯುತ್ತದೆ. ಇದರ ಲ್ಯಾರಿಸ್ಸಾ ಕಾಂಡವು ಮಜಬೂತಾಗಿದ್ದು, ಶಾಖೋಪಶಾಖೆಗಳಾಗಿ ಹಬ್ಬಿರುವ ಗರಿಯಂಥ ಎಲೆಗೊಂಚಲನ್ನು ಹೊಂದಿರುತ್ತದೆ. ವಾಸ್ತವವಾಗಿ ಈ "ಎಲೆಗಳು" ಚಿಪ್ಪಿನಂಥ ಎಲೆಗಳ ಪರ್ವಸ್ಥಾನದಲ್ಲಿರುವ ಸೂಜಿಯಂಥ ಚಪ್ಪಟೆಕಾಂಡಗಳಾಗಿದ್ದು (ರೂಪಾಂತರಿತ ಕಾಂಡಗಳು), ಅವು ೬ ರಿಂದ ೩೨ ಮಿ.ಮೀ. ಉದ್ದವಾಗಿ ಮತ್ತು ೧ ಮಿಮೀ. ಅಗಲವಾಗಿರುತ್ತವೆ, ಹಾಗೂ 4–15 ಎಲೆಗಳು ಒಟ್ಟಾಗಿ ಗುಚ್ಛದಂತಿರುತ್ತವೆ. ಇದರ ಬೇರುಗಳು ಗೆಡ್ಡೆಯ ಹಾಗಿರುತ್ತವೆ.ಹೂವುಗಳು ಘಂಟಾಕಾರದಲ್ಲಿದ್ದು, ನಸು ಹಸಿರುಬಣ್ಣ-ಬಿಳಿಯಿಂದ ಮೊದಲ್ಗೊಂಡು ಬಹುತೇಕ ಹಳದಿ ಬಣ್ಣದ ಛಾಯೆಯವರೆಗೆ ಅವುಗಳ ಬಣ್ಣವಿರುತ್ತದೆ. ತಳದಲ್ಲಿ ಆಂಶಿಕವಾಗಿ ಬೆಸೆದುಕೊಂಡಿರುವ ಆರು ಪರಿಪುಷ್ಪ ಭಾಗಗಳೊಂದಿಗೆ (ಟೆಪಲ್ಸ್‌) ಹೂವಿನ ಗಾತ್ರವು 4.5–6.5 millimetres (0.18–0.26 in)ಉದ್ದವಾಗಿದ್ದು, ಕಿರುಕೊಂಬೆಗಳ ಸಂಧಿಸ್ಥಾನಗಳಲ್ಲಿ ಏಕಸ್ವರೂಪದಲ್ಲಿ ಅಥವಾ 2-3 ಗೊಂಚಲುಗಳಲ್ಲಿ ಅವು ಕಾಣಿಸಿಕೊಳ್ಳುತ್ತವೆ. ಗಂಡು ಮತ್ತು ಹೆಣ್ಣು ಹೂವುಗಳು ಪ್ರತ್ಯೇಕ ಸಸ್ಯಗಳಲ್ಲಿ ಕಾಣಿಸಿಕೊಳ್ಳುವುದರೊಂದಿಗೆ, ಇದು ಸಾಮಾನ್ಯವಾಗಿ ಭಿನ್ನಲಿಂಗಿಯಾಗಿರುತ್ತದೆಯಾದರೂ, ಕೆಲವೊಮ್ಮೆ ಉಭಯಲಿಂಗಿ ಹೂವುಗಳೂ ಕಂಡುಬರುತ್ತವೆ. ಇದರ ಹಣ್ಣು, ಕೆಂಪಾದ ತಿರುಳಲ್ಲಿ ಬೀಜವನ್ನು ಹೊಂದಿರುವ ಒಂದು ಚಿಕ್ಕ ಹಣ್ಣಾಗಿದ್ದು, 6–10 ಮಿಮೀನಷ್ಟು ವ್ಯಾಸವನ್ನು ಹೊಂದಿರುತ್ತದೆ.ಯುರೋಪ್‌ನ ಪಶ್ಚಿಮ ತೀರಪ್ರದೇಶಗಳಿಗೆ ಸೇರಿದ (ಉತ್ತರ ಸ್ಪೇನ್‌ನ ಉತ್ತರ ಭಾಗದಿಂದ ಪ್ರಾರಂಭಿಸಿ, ಐರ್ಲೆಂಡ್‌, ಗ್ರೇಟ್‌ ಬ್ರಿಟನ್‌, ಮತ್ತು ವಾಯವ್ಯ ಜರ್ಮನಿಯವರೆಗಿನ ಭಾಗ) ಸಸ್ಯಗಳನ್ನು ಆಸ್ಪ್ಯಾರಗಸ್‌ ಅಫಿಷಿನಾಲಿಸ್‌ ಉಪಜಾತಿ ಪ್ರಾಸ್ಟ್ರೇಟಸ್‌ (ಡುಮಾರ್ಟ್‌.) ಕಾರ್ಬ್‌ ಎಂದು ಪರಿಗಣಿಸಲಾಗುತ್ತದೆ. ಇದು ತನ್ನ ಕಡಿಮೆ-ಬೆಳವಣಿಗೆಯ ವಿಲಕ್ಷಣತೆಯಿಂದ ಗುರುತಿಸಲ್ಪಟ್ಟಿದ್ದು, ನೆಲದ ಮೇಲೆ ಹಬ್ಬುವ ಕಾಂಡಗಳು ಕೇವಲ ....ದಷ್ಟು ಎತ್ತರಕ್ಕೆ30–70 centimetres (12–28 in) ಬೆಳೆಯುತ್ತವೆ, ಹಾಗೂ ....ದಷ್ಟು ಉದ್ದದ2–18 millimetres (0.079–0.709 in), ಗಿಡ್ಡನಾದ ಚಪ್ಪಟೆಕಾಂಡಗಳನ್ನು ಅದು ಹೊಂದಿರುತ್ತದೆ.[೧][೫] ಇದನ್ನು ಆಸ್ಪ್ಯಾರಗಸ್‌ ಪ್ರಾಸ್ಟ್ರೇಟಸ್ ಡುಮಾರ್ಟ್‌ ಎಂಬ ಒಂದು ಪ್ರತ್ಯೇಕವಾದ ಜಾತಿಯನ್ನಾಗಿ ಕೆಲವೊಂದು ಲೇಖಕರು ಪರಿಗಣಿಸಿದ್ದಾರೆ.[೬][೭]

ಇತಿಹಾಸ

ಶತಾವರಿಯು ಆಹ್ಲಾದಕರ ಪರಿಮಳ ಹಾಗೂ ಮೂತ್ರವರ್ಧಕ ಗುಣಲಕ್ಷಣಗಳನ್ನು ಹೊಂದಿರುವುದರಿಂದಾಗಿ, ಇದನ್ನು ಪ್ರಾಚೀನ ಕಾಲದಿಂದಲೂ ಒಂದು ತರಕಾರಿ ಮತ್ತು ಔಷಧಿಯಂತೆ ಬಳಸಿಕೊಂಡು ಬರಲಾಗಿದೆ. ಮೂರನೇ ಶತಮಾನದ ADಯಲ್ಲಿ ಬಂದ ಅಪಿಷಿಯಸ್‌ಡಿ ರೆ ಕಾಕ್ವಿನೇರಿಯಾ, ಎಂಬ ಪುಸ್ತಕದ IIIನೇ ಭಾಗವು ಪಾಕವಿಧಾನಗಳಿಗೆ ಸಂಬಂಧಿಸಿದಂತೆ ಲಭ್ಯವಿರುವ ಅತ್ಯಂತ ಹಳೆಯ ಪುಸ್ತಕವಾಗಿದ್ದು, ಶತಾವರಿಯನ್ನು ಅಡುಗೆಯಲ್ಲಿ ಬಳಸುವ ಒಂದು ಪಾಕವಿಧಾನವನ್ನು ಅದು ಒಳಗೊಂಡಿದೆ. ಶತಾವರಿಯ ಋತುವಿನಲ್ಲಿ ಅದನ್ನು ತಾಜಾರೂಪದಲ್ಲಿ ತಿನ್ನುತ್ತಿದ್ದ ಹಾಗೂ ಅದನ್ನು ಚಳಿಗಾಲದಲ್ಲಿ ಬಳಸಲೆಂದು ಒಣಗಿಸಿಟ್ಟುಕೊಳ್ಳುತ್ತಿದ್ದ ಈಜಿಪ್ಟಿನವರು, ಗ್ರೀಕರು ಮತ್ತು ರೋಮನ್ನರು ಇದನ್ನು ಬೆಳೆಯುತ್ತಿದ್ದರು. ಮಧ್ಯಯುಗದಲ್ಲಿ ಇದು ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿತಾದರೂ, ಹದಿನೇಳನೇ ಶತಮಾನದಲ್ಲಿ ಮತ್ತೆ ತನ್ನ ಸ್ಥಾನವನ್ನು ದಕ್ಕಿಸಿಕೊಂಡಿತು.[೮]

ಉಪಯೋಗಗಳು

ಪಾಕಶಾಲೆಯ ಉಪಯೋಗಗಳು

 src=
ಅಂಗಡಿಯೊಂದರ ಪ್ರದರ್ಶಿಕೆಯ ಮೇಲೆ ಮೂರು ವಿಧದ ಶತಾವರಿಗಳನ್ನಿರಿಸಿರುವುದು. ಬಿಳಿ ಶತಾವರಿ ಹಿಂಭಾಗದಲ್ಲಿದ್ದರೆ, ಹಸಿರು ಶತಾವರಿ ಮಧ್ಯಭಾಗದಲ್ಲಿದೆ.ಮುಂಭಾಗದಲ್ಲಿರುವ ಸಸ್ಯವು ಆರ್ನಿಥೋಗ್ಯಾಲಮ್ ಪೈರೆನೈಕಮ್‌ ಪ್ರಬೇಧವಾಗಿದ್ದು, ಇದನ್ನು ಸಾಮಾನ್ಯವಾಗಿ ಕಾಡು ಶತಾವರಿ ಎಂದು ಕರೆಯಲಾಗುತ್ತದೆ, ಮತ್ತು ಕೆಲವೊಮ್ಮೆ "ಸ್ನಾನದ ಶತಾವರಿ" ಎಂದು ಕರೆಯಲಾಗುತ್ತದೆ.

ಶತಾವರಿಯ ಎಳೆ ಚಿಗುರುಗಳನ್ನು ಮಾತ್ರವೇ ತಿನ್ನಲು ಬಳಸಲಾಗುತ್ತದೆ. ಶತಾವರಿಯಲ್ಲಿನ ಕ್ಯಾಲೊರಿಗಳ ಪ್ರಮಾಣ ಕಡಿಮೆಯಿದ್ದು, ಕೊಲೆಸ್ಟರಾಲ್‌ನ್ನು ಇದು ಹೊಂದಿಲ್ಲ. ಸೋಡಿಯಂ ಪ್ರಮಾಣವು ಇದರಲ್ಲಿ ತುಂಬಾ ಕಡಿಮೆಯಿರುವುದರಿಂದ ಶತಾವರಿ ತುಂಬಾ ಆರೋಗ್ಯಕರ. ಫೋಲಿಕ್ ಆಮ್ಲ, ಪೊಟಾಷಿಯಂ, ಆಹಾರಪಥ್ಯದ ನಾರುಪದಾರ್ಥ, ಮತ್ತು ರೂಟಿನ್‌ ಇವೇ ಮೊದಲಾದವು ಶತಾವರಿಯಲ್ಲಿ ಹೇರಳವಾಗಿವೆ. ಶತಾವರಿ ಸಸ್ಯದಲ್ಲಿ ಆಸ್ಪರಾಜಿನ್‌ ಎಂಬ ಅಮೈನೋ ಆಮ್ಲವು ಹೇರಳವಾಗಿದ್ದು, ಆಸ್ಪ್ಯಾರಗಸ್‌ (ಶತಾವರಿ) ಸಸ್ಯದಲ್ಲಿ ಅದು ಇರುವ ಕಾರಣದಿಂದಾಗಿಯೇ ಆ ಸಂಯುಕ್ತಕ್ಕೆ ಆಸ್ಪರಾಜಿನ್‌ ಎಂಬ ಹೆಸರುಬಂದಿದೆ.

ಚಿಗುರುಗಳನ್ನು ಬಳಸಿ ವಿಶ್ವದೆಲ್ಲೆಡೆ ಅಸಂಖ್ಯಾತ ವಿಧಾನಗಳಲ್ಲಿ ವಿವಿಧ ಆಹಾರಪದಾರ್ಥಗಳನ್ನು ತಯಾರಿಸಿ, ಬಡಿಸಲಾಗುತ್ತದೆ ಏಷ್ಯಾದ-ಶೈಲಿಯ ಆಹಾರ ತಯಾರಿಕಾ ಕ್ರಮದಲ್ಲಿ, ಶತಾವರಿಯನ್ನು ಹಲವು ಸಂದರ್ಭಗಳಲ್ಲಿ ಕಲಕಿ-ಹುರಿದು ಬಳಸಲಾಗುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿನ ಕ್ಯಾಂಟನ್‌ ಶೈಲಿಯ ಭೋಜನಾಮಂದಿರಗಳಲ್ಲಿ, ಕೋಳಿಮರಿ ಮಾಂಸ, ಸೀಗಡಿ, ಅಥವಾ ದನದ ಮಾಂಸದೊಂದಿಗೆ ಶತಾವರಿಯನ್ನು ಬೆರೆಸಿ ಹುರಿದು ಬಡಿಸಲಾಗುತ್ತದೆ, ಮತ್ತು ಹಂದಿ ಮಾಂಸದಲ್ಲಿ ಸುತ್ತಿಟ್ಟೂ ಸಹ ಬಡಿಸಲಾಗುತ್ತದೆ. ಶತಾವರಿಯನ್ನು ಇದ್ದಿಲು ಅಥವಾ ಗಟ್ಟಿಮರದ ಕರಿಗೆಂಡಗಳ ಮೇಲಿನ ಕಬ್ಬಿಣದ ಸರಳುಗಳ ಮೇಲೆಯೂ ಸಹ ಶೀಘ್ರವಾಗಿ ಬೇಯಿಸಬಹುದು. ಬಿಸಿನೀರಿನಲ್ಲಿ ಬೇಯಿಸಿ ಮಾಡಿದ ಕೆಲವೊಂದು ಮಾಂಸಭಕ್ಷ್ಯಗಳು ಹಾಗೂ ಎಸರುಗಳಲ್ಲಿನ (ಅಂದರೆ ಸೂಪುಗಳಲ್ಲಿನ) ಒಂದು ಪ್ರಮುಖ ಘಟಕವಾಗಿಯೂ ಇದನ್ನು ಬಳಸಲಾಗುತ್ತದೆ. ಫ್ರೆಂಚ್‌ ಶೈಲಿಯ ಆಹಾರ ತಯಾರಿಕೆಯಲ್ಲಿ, ಶತಾವರಿಯನ್ನು ಕುದಿಸಿ ಅಥವಾ ಆವಿಯಲ್ಲಿ ಬೇಯಿಸಿ ಹಾಲೆಂಡ್‌ ಪಚ್ಚಡಿ ಅಥವಾ ಗೊಜ್ಜು, ಕರಗಿಸಿದ ಬೆಣ್ಣೆ ಅಥವಾ ಆಲೀವ್ ಎಣ್ಣೆ, ಪಾರ್ಮ ಗಿಣ್ಣು ಅಥವಾ ಮೇಯನೇಸ್‌ ಮಸಾಲೆ ಭಕ್ಷ್ಯದೊಂದಿಗೆ ಬಡಿಸಲಾಗುತ್ತದೆ. ಇದನ್ನು ಸಿಹಿಭಕ್ಷ್ಯವೊಂದರಲ್ಲಿಯೂ (ಅಥವಾ ಹಣ್ಣು-ಐಸ್‌ಕ್ರೀಂನ ಮಿಶ್ರಣದಲ್ಲಿಯೂ) ಸಹ ಬಳಸಬಹುದು.[೯] ಮುಂಬೆಳೆಯುವ (ಅಂದರೆ ಋತುವಿನ ಆರಂಭದಲ್ಲಿ ಮೊಟ್ಟಮೊದಲಿಗೆ ಕಾಣಿಸಿಕೊಳ್ಳುವ) ಶತಾವರಿಯು ಅತ್ಯುತ್ತಮ ಗುಣಮಟ್ಟದ್ದೆಂದು ಪರಿಗಣಿಸಲ್ಪಟ್ಟಿದ್ದು, ಇದನ್ನು ಹಾಗೆಯೇ ಆವಿಯಲ್ಲಿ ಬೇಯಿಸಲಾಗುತ್ತದೆ ಮತ್ತು ಕರಗಿಸಿದ ಬೆಣ್ಣೆಯೊಂದಿಗೆ ಬಡಿಸಲಾಗುತ್ತದೆ. ಶತಾವರಿಯ ಚಿಗುರುಗಳು ನವಿರಾಗಿ ಬೇಯುವಲ್ಲಿ ಹಾಗೂ ಅವುಗಳ ತುದಿಗಳು ನೀರಿನ ಸಂಪರ್ಕದಿಂದ ಆಚೆಯಿರುವಲ್ಲಿ ಶತಾವರಿಯನ್ನು ಬೇಯಿಸುವ ಉದ್ದದ, ಕಿರಿದಾದ ಮಡಕೆಗಳು ಅವಕಾಶಮಾಡಿಕೊಡುತ್ತವೆ.ಶತಾವರಿಯಿಂದ ಉಪ್ಪಿನಕಾಯಿ ಹಾಕಬಹುದು ಮತ್ತು ಅದನ್ನು ಹಲವಾರು ವರ್ಷಗಳವರೆಗೆ ಶೇಖರಿಸಿಡಬಹುದು. ಈ ವಿಧದಲ್ಲಿ ತಯಾರಿಸಲ್ಪಟ್ಟ ಶತಾವರಿಯ ಉಪ್ಪಿನಕಾಯಿಗೆ ಕೆಲವೊಂದು ಬ್ರಾಂಡ್‌ಗಳು "ಮ್ಯಾರಿನೇಡ್‌ ದ್ರಾವಣದಲ್ಲಿ ಹಾಕಿರುವ ಉಪ್ಪಿನಕಾಯಿ" ಎಂಬ ಹಣೆಪಟ್ಟಿಯನ್ನು ಅಂಟಿಸುತ್ತವೆ.ಶತಾವರಿಯ ತಳಭಾಗಕ್ಕೆ ಅನೇಕ ವೇಳೆ ಮರಳು ಮತ್ತು ಕೊಳೆಯು ಅಂಟಿಕೊಂಡಿರುತ್ತದೆ. ಆದ್ದರಿಂದ, ಶತಾವರಿಯನ್ನು ಬಳಸಿ ಅಡುಗೆ ಮಾಡುವಾಗ ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಅತ್ಯಗತ್ಯ. ವರ್ಷಾದ್ಯಂತ ನಡೆಯುವ ಶತಾವರಿಯ ಆಮದುಗಳ ಲಭ್ಯತೆಯಿಂದಾಗಿ, ಹಿಂದೊಮ್ಮೆ ಇದ್ದಂತೆ ಇದನ್ನು ಮಧುರಭಕ್ಷ್ಯವಾಗಿ ಬಳಸುವ ಪ್ರಮಾಣವು ಕಡಿಮೆಯಾಗಿದೆಯಾದರೂ, ಹಸಿರು ಶತಾವರಿಯನ್ನು ವಿಶ್ವಾದ್ಯಂತ ಆಹಾರರೂಪದಲ್ಲಿ ಸೇವಿಸಲಾಗುತ್ತದೆ.[೫] ಆದಾಗ್ಯೂ, UKಯಲ್ಲಿ, ಕಡಿಮೆಯಿರುವ ಬೆಳೆಯುವ ಅವಧಿ ಹಾಗೂ ಸ್ಥಳೀಯ ಉತ್ಪನ್ನಕ್ಕೆ ಬೇಡಿಕೆಯಿರುವ ಕಾರಣದಿಂದಾಗಿ, ಶತಾವರಿಯು ಒಂದು ಅತ್ಯಧಿಕ ಮೌಲ್ಯವನ್ನು ಪಡೆದುಕೊಂಡಿದೆ ಮತ್ತು "ಆಹಾರ ಸಂಬಂಧಿತ ದಿನಚರಿಯಲ್ಲಿ ಶತಾವರಿಯ ಋತುವು ಒಂದು ರಸವತ್ತಾದ ಅಂಶವಾಗಿದೆ."[೧೦] ಯುರೋಪಿಗೆ ಸೇರಿದ ಉತ್ತರಭಾಗದ ಯುರೋಪ್‌ನಲ್ಲಿ "ಬಿಳಿಯ ಬಂಗಾರ" ಎಂಬ ಅಡ್ಡಹೆಸರನ್ನುಳ್ಳ ಸ್ಥಳೀಯ ಬಿಳಿ ಶತಾವರಿಗಾಗಿ ಒಂದು ಬಲವಾದ ಕಾಲೋಚಿತ ಅನುಸರಣೆ ಇರುವುದನ್ನು ಕಾಣಬಹುದು.

 src=
ಇಬ್ಬನಿ ಬಿಂದುಗಳಿಂದ ಕೂಡಿದ ಅಸ್ಪ್ಯಾರಗಸ್ ಅಫಿಷಿನಾಲಿಸ್‌.
 src=
ಶತಾವರಿಯ ಜರ್ಮನ್‌ ಸಸ್ಯವಿಜ್ಞಾನದ ಸಚಿತ್ರ ವಿವರಣೆ

ಔಷಧೀಯ ಉಪಯೋಗಗಳು

ಗೇಲನ್‌ ಎಂಬ ಎರಡನೇ ಶತಮಾನದ ವೈದ್ಯನೊಬ್ಬ ಶತಾವರಿಯನ್ನು "ಚೊಕ್ಕಟಗೊಳಿಸುವ ಮತ್ತು ವಾಸಿಮಾಡುವ" ಗುಣವನ್ನು ಹೊಂದಿರುವ ಸಸ್ಯ ಎಂದು ವಿವರಿಸಿದ್ದಾನೆ.ಶತಾವರಿಯು ಫೋಲೇಟ್‌ ಮತ್ತು ಪೊಟಾಷಿಯಂನ ಒಂದು ಕಡಿಮೆ-ಕ್ಯಾಲೊರಿಯ ಮೂಲವಾಗಿದೆ ಎಂದು ಪೋಷಣಶಾಸ್ತ್ರದ ಅಧ್ಯಯನಗಳು ತೋರಿಸಿವೆ.ಇದರ ತೊಟ್ಟುಗಳಲ್ಲಿ ಆಕ್ಸಿಡೀಕಾರಕ ನಿರೋಧಕಗಳ (ಅಂದರೆ, ಆಂಟಿ ಆಕ್ಸಿಡೆಂಟುಗಳ) ಪ್ರಮಾಣ ಹೆಚ್ಚು ಎನ್ನಬಹುದು. "ಶತಾವರಿಯು ಅತ್ಯಾವಶ್ಯಕ ಪೋಷಕಾಂಶಗಳನ್ನು ಒದಗಿಸುತ್ತದೆ: ಶತಾವರಿಯ ಆರು ಚೂಪುಕಾಂಡಗಳು ಸುಮಾರು 135 ಮೈಕ್ರೋಗ್ರಾಂಗಳಷ್ಟು (μg) ಫೋಲೇಟ್‌‌ನ್ನು ಹೊಂದಿರುತ್ತವೆ. ಅಂದರೆ ವಯಸ್ಕರು ಸೇವಿಸಬೇಕಾದ ಶಿಫಾರಿತ ದಿನವಹಿ ಸೇವನಾ (RDI-ರೆಕಮಂಡೆಡ್‌ ಡೇಲಿ ಇನ್‌ಟೇಕ್‌) ಪ್ರಮಾಣದ ಸರಿಸುಮಾರು ಅರ್ಧದಷ್ಟು ಭಾಗವನ್ನು ಇವು ಹೊಂದಿವೆ. ಜೊತೆಗೆ, 545 μgನಷ್ಟು ಬೀಟಾ ಕ್ಯಾರೋಟಿನ್‌, ಮತ್ತು 20 ಮಿಲಿಗ್ರಾಂಗಳಷ್ಟು ಪೊಟಾಷಿಯಂನ್ನು ಶತಾವರಿಯ ಈ ಆರು ಚೂಪುಕಾಂಡಗಳು ಹೊಂದಿವೆ" ಎಂದು 'ರೀಡರ್ಸ್‌ ಡೈಜೆಸ್ಟ್‌' ನಿಯತಕಾಲಿಕದಲ್ಲಿ ಪ್ರಕಟವಾದ ಒಂದು ಲೇಖನವು ಸೂಚಿಸುತ್ತದೆ. ಹೃದ್ರೋಗದಲ್ಲಿ ಸೂಚಿತವಾಗಿರುವ ಹೋಮೋಸಿಸ್ಟೀನ್‌ ಎಂಬ ಒಂದು ವಸ್ತುವನ್ನು ದಮನಮಾಡುವಲ್ಲಿ ಫೋಲೇಟ್‌ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಗರ್ಭಿಣಿ ತಾಯಂದಿರಿಗೂ ಸಹ ಫೋಲೇಟ್‌ ಅತ್ಯಾವಶ್ಯಕವಾಗಿದೆ. ಏಕೆಂದರೆ ಶಿಶುಗಳಲ್ಲಿನ ನರವ್ಯೂಹದ ನಳಿಕೆಗಳ ನ್ಯೂನತೆಗಳಂಥ ವಿಷಮ ಪರಿಸ್ಥಿತಿಗಳಿಂದ ಇದು ರಕ್ಷಿಸುತ್ತದೆ. ಹೇರಳವಾಗಿ ಪೊಟಾಷಿಯಂನ್ನು ಪಡೆಯುವುದರಿಂದ ದೇಹದಿಂದ ಕ್ಯಾಲ್ಷಿಯಂ ಅಂಶವು ನಷ್ಟವಾಗುವುದನ್ನು ಕಡಿಮೆ ಮಾಡಬಹುದು ಎಂದು ಹಲವಾರು ಅಧ್ಯಯನಗಳು ಸೂಚಿಸಿವೆ.ನಿರ್ದಿಷ್ಟವಾಗಿ ಹೇಳುವುದಾದರೆ, ಹಸಿರು ಶತಾವರಿಯಲ್ಲಿ C ಜೀವಸತ್ವವು ಹೇರಳವಾಗಿದೆ.[೧೧]ದೇಹವು ಕೊಲಾಜೆನ್‌ನ್ನು ಉತ್ಪಾದಿಸಲು ಹಾಗೂ ಅದರ ಮಟ್ಟವನ್ನು ನಿರ್ವಹಿಸಿಕೊಂಡು ಹೋಗುವಲ್ಲಿ C ಜೀವಸತ್ವವು ನೆರವಾಗುತ್ತದೆ. ಒಂದು ಅಚ್ಚರಿಯ ಪ್ರೊಟೀನು ಎಂದು ಪರಿಗಣಿಸಲ್ಪಟ್ಟಿರುವ ಕೊಲಾಜೆನ್‌, ದೇಹದ ಎಲ್ಲಾ ಜೀವಕೋಶಗಳು ಹಾಗೂ ಅಂಗಾಂಶಗಳನ್ನೂ ಒಟ್ಟಾಗಿ ಹಿಡಿದಿಡುವಲ್ಲಿ ನೆರವಾಗುತ್ತದೆ.'ಹೋಲ್ ಫುಡ್ಸ್‌ ಕಂಪ್ಯಾನಿಯನ್‌: ಎ ಗೈಡ್‌ ಫಾರ್ ಅಡ್ವೆಂಚರಸ್‌ ಕುಕ್ಸ್‌, ಕ್ಯೂರಿಯಸ್ ಷಾಪರ್ಸ್‌ ಅಂಡ್‌ ಲವರ್ಸ್‌ ಆಫ್ ನ್ಯಾಚುರಲ್ ಫುಡ್ಸ್‌' ಎಂಬ ಪುಸ್ತಕವನ್ನು ಬರೆದ ಡಿ.ಆನ್‌ಸ್ಟಾಡ್‌ ಎಂಬಾತ, "ಶತಾವರಿಯು ತನ್ನ ಔಷಧೀಯ ಗುಣಗಳ ಕಾರಣದಿಂದಾಗಿ ಬಹಳ ಕಾಲದಿಂದಲೂ ಗುರುತಿಸಲ್ಪಟ್ಟಿದೆ" ಎಂದು ಬರೆದಿದ್ದಾನೆ. "ಮೂತ್ರವರ್ಧಕವೊಂದರ ಪಾತ್ರವನ್ನು ವಹಿಸುವ ವಸ್ತುಗಳನ್ನು ಶತಾವರಿಯು ಒಳಗೊಂಡಿದೆ. ನಮ್ಮನ್ನು ಆಯಾಸಗೊಳ್ಳುವಂತೆ ಮಾಡುವ ಅಮೋನಿಯಾವನ್ನು ಇದು ತಟಸ್ಥಗೊಳಿಸುತ್ತದೆ, ಮತ್ತು ಸಣ್ಣ ರಕ್ತನಾಳಗಳು ಛಿದ್ರವಾಗದಂತೆ ಅವುಗಳನ್ನು ರಕ್ಷಿಸುತ್ತದೆ. ಶತಾವರಿಯಲ್ಲಿನ ನಾರಿನ ಅಂಶವು ಅದನ್ನೊಂದು ವಿರೇಚಕವನ್ನಾಗಿಸಿದೆ."

ಸಾಗುವಳಿ

ಶತಾವರಿಯು ಸಮುದ್ರತೀರದ ಸ್ವಾಭಾವಿಕ ನೆಲೆಗಳಲ್ಲಿ ಆಗಿಂದಾಗ್ಗೆ ಹುಟ್ಟುತ್ತದೆಯಾದ್ದರಿಂದ, ಸಾಮಾನ್ಯ ಕಳೆಗಳು ಬೆಳೆದುಕೊಳ್ಳುವುದಕ್ಕೆ ತುಂಬಾ ಲವಣಯುಕ್ತವಾಗಿ ಪರಿಣಮಿಸುವ ಮಣ್ಣುಗಳಲ್ಲಿ ಇದು ಹುಲುಸಾಗಿ ಬೆಳೆಯುತ್ತದೆ. ಈ ದೃಷ್ಟಿಯಿಂದ, ಶತಾವರಿಯನ್ನು ಬೆಳೆಯಲೆಂದು ಉದ್ದೇಶಿಸಲಾದ ಜಮೀನುಗಳಲ್ಲಿ ಕಳೆಗಳನ್ನು ದಮನಮಾಡಲು ಕೊಂಚ ಉಪ್ಪನ್ನು ಸಾಂಪ್ರದಾಯಿಕವಾಗಿ ಬಳಸಲಾಗುತ್ತಿತ್ತು; ಆದರೆ ಹೀಗೆ ಮಾಡುವುದರಿಂದ ಸದರಿ ಜಮೀನಿನ ಮಣ್ಣು ಮತ್ತಾವುದೇ ಬೆಳೆ ಬೆಳೆಯಲು ಯೋಗ್ಯವಾಗಿ ಉಳಿಯುವುದಿಲ್ಲವಾದ್ದರಿಂದ ಈ ವಿಧಾನವು ಅನನುಕೂಲತೆಯನ್ನು ತಂದೊಡ್ಡುತ್ತದೆ. ಕೆಲವೊಂದು ಪ್ರದೇಶಗಳು ಇತರ ಬೆಳೆಗಳನ್ನು ಬೆಳೆಯುವುದಕ್ಕಿಂತ ಶತಾವರಿಯನ್ನು ಬೆಳೆಯಲು ಉತ್ತಮವಾಗಿವೆ. ಮಣ್ಣಿನ ಫಲವತ್ತತೆಯು ಒಂದು ಬೃಹತ್ ಅಂಶವಾಗಿ ಕಂಡುಬರುತ್ತದೆ. ಸಸ್ಯದ "ಅಗ್ರಭಾಗಗಳನ್ನು" ಚಳಿಗಾಲದಲ್ಲಿ ನೆಡಲಾಗುತ್ತದೆ, ಮತ್ತು ವಸಂತ ಋತುವಿನಲ್ಲಿ ಮೊದಲ ಚಿಗುರುಗಳು ಕಾಣಿಸಿಕೊಳ್ಳುತ್ತವೆ; ಮೊದಲ ಬಿಡಿಸುವಿಕೆಗಳು ಅಥವಾ "ಕಿತ್ತ ಸಣ್ಣಕಾಯಿಗಳು" ಸ್ಪ್ರೂ ಶತಾವರಿ ಎಂದು ಹೆಸರಾಗಿವೆ.ಸ್ಪ್ರೂ ಶತಾವರಿಗಳು ತೆಳುವಾದ ಕಾಂಡಗಳನ್ನು ಹೊಂದಿರುತ್ತವೆ.[೧೨]

 src=
ನ್ಯೂಯಾರ್ಕ್‌ ನಗರದಲ್ಲಿನ ಮಾರಾಟಕ್ಕಾಗಿರುವ ಹಸಿರು ಶತಾವರಿ.

ಸ್ಪಾರ್ಗೆಲ್‌‌ ಎಂದು ಕರೆಯಲಾಗುವ ಬಿಳಿ ಶತಾವರಿಯನ್ನು ಬೆಳೆಯುವಾಗ ಸಸ್ಯಗಳಿಗೆ ಬೇಕಾದ ಬೆಳಕನ್ನು ಕೊಡದೆ, ಅವು ಒಡ್ಡಿಕೊಳ್ಳುವ ನೇರಳಾತೀತ ಕಿರಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಲಾಗುತ್ತದೆ. ಈ ಪ್ರಭೇದವು ಹಸಿರು ಶತಾವರಿ ಪ್ರಭೇದಕ್ಕಿಂತ ಕಡಿಮೆ ಕಹಿಯನ್ನು ಹೊಂದಿದ್ದು, ನೆದರ್‌ಲೆಂಡ್ಸ್‌, ಫ್ರಾನ್ಸ್‌, ಬೆಲ್ಜಿಯಂ ಮತ್ತು ಜರ್ಮನಿಯಲ್ಲಿ ಅತಿಹೆಚ್ಚು ಜನಪ್ರಿಯವಾಗಿದೆ. ಈ ದೇಶಗಳಲ್ಲಿ ವಾರ್ಷಿಕವಾಗಿ 57,000 ಟನ್ನುಗಳಷ್ಟು (ಗ್ರಾಹಕರ ಬೇಡಿಕೆಗಳ 61%ನಷ್ಟು ಭಾಗ) ಬಿಳಿ ಶತಾವರಿಯನ್ನು ಬೆಳೆಯಲಾಗುತ್ತದೆ.[೧೩]ಉನ್ನತ ಮಟ್ಟದ ಸಕ್ಕರೆ ಅಂಶ ಮತ್ತು ಕಡಿಮೆ ಪ್ರಮಾಣದ ನಾರುಪದಾರ್ಥದ ಅಂಶಗಳನ್ನು ಹೊಂದುವ ಮೂಲಕ ನೇರಳೆ ಶತಾವರಿಯು ಹಸಿರು ಶತಾವರಿ ಹಾಗೂ ಬಿಳಿ ಶತಾವರಿಗಳಿಗಿಂತ ಭಿನ್ನವಾಗಿದೆ. ನೇರಳೆ ಶತಾವರಿಯನ್ನು ಮೊಟ್ಟಮೊದಲ ಬಾರಿಗೆ ಇಟಲಿಯಲ್ಲಿ ಅಭಿವೃದ್ಧಿಪಡಿಸಲಾಯಿತು ಹಾಗೂ ವಯೊಲೆಟೊ ಡಿ'ಆಲ್ಬೆಂಗಾ ಎಂಬ ಪ್ರಭೇದನಾಮದ ಅಡಿಯಲ್ಲಿ ಅದಕ್ಕೆ ವಾಣಿಜ್ಯ ಸ್ವರೂಪವನ್ನು ನೀಡಲಾಯಿತು. ಅಲ್ಲಿಂದೀಚೆಗೆ, ಅಮೆರಿಕ ಸಂಯುಕ್ತ ಸಂಸ್ಥಾನಗಳು ಮತ್ತು ನ್ಯೂಜಿಲೆಂಡ್‌ನಂಥ ದೇಶಗಳಲ್ಲಿ ತಳಿ-ಬೆಳೆಸುವಿಕೆಯ ಕಾರ್ಯವು ಮುಂದುವರಿದುಕೊಂಡುಬಂದಿದೆ.ವಾಯವ್ಯ ಭಾಗದ ಯುರೋಪ್‌ನಲ್ಲಿ, ಶತಾವರಿ ಉತ್ಪಾದನೆಯ ಋತುವು ಚಿಕ್ಕದಾಗಿದೆ. ಏಪ್ರಿಲ್‌ 23ರಂದು ಸಾಂಪ್ರದಾಯಿಕವಾಗಿ ಆರಂಭವಾಗುವ ಈ ಅವಧಿಯು ನಡುಬೇಸಿಗೆಯ ದಿನದಂದು ಅಂತ್ಯಗೊಳ್ಳುತ್ತದೆ.[೧೪]

ಒಡನಾಡಿ ಸಸ್ಯ ನೆಡುವಿಕೆ

ಟೊಮ್ಯಾಟೊ ಸಸ್ಯಗಳಿಗೆ ಶತಾವರಿ ಸಸ್ಯವು ಒಂದು ಪ್ರಯೋಜನಕಾರಿ ಒಡನಾಡಿ ಸಸ್ಯವಾಗಿದೆ. ಟೊಮ್ಯಾಟೊ ಸಸ್ಯಗಳ ಇತರ ಸಾಮಾನ್ಯ ಒಡನಾಡಿ ಸಸ್ಯಗಳು ಮಾಡುವಂತೆಯೇ, ಟೊಮ್ಯಾಟೊ ಸಸ್ಯವು ಶತಾವರಿಯ ಜೀರುಂಡೆ ಕೀಟವನ್ನು ಹಿಮ್ಮೆಟ್ಟಿಸುತ್ತದೆ. ಇದೇ ರೀತಿಯಲ್ಲಿ ಟೊಮ್ಯಾಟೊ ಸಸ್ಯಗಳಿಗೆ ಹಾನಿಯನ್ನುಂಟುಮಾಡುವ ನೆಮಟೋಡ್‌ ವರ್ಗಕ್ಕೆ ಸೇರಿದ ಒಂದಷ್ಟು ಬೇರಿನ ಹಾನಿಕಾರಕ ಹುಳುಗಳನ್ನು ಶತಾವರಿಯು ಹಿಮ್ಮೆಟ್ಟಿಸಬಹುದು.[೧೫]

ವಾಣಿಜ್ಯೋದ್ದೇಶದ ಉತ್ಪಾದನೆ

 src=
2005ರಲ್ಲಿನ ಶತಾವರಿ ಉತ್ಪಾದನೆಯು ಅತ್ಯುನ್ನತ ಉತ್ಪಾದಕನ ಒಂದು ಶೇಕಡಾವಾರು ಪ್ರಮಾಣವಾಗಿ ತೋರಿಸಲ್ಪಟ್ಟಿರುವುದು (ಚೀನಾ – 5,906,000 ಟನ್ನುಗಳು). [32] [33][34]

2007ರಲ್ಲಿದ್ದಂತೆ, ಪೆರು ದೇಶವು ವಿಶ್ವದ ಅಗ್ರಗಣ್ಯ ಶತಾವರಿ ರಫ್ತುದಾರನಾಗಿದ್ದರೆ, ನಂತರದ ಸ್ಥಾನಗಳನ್ನು ಚೀನಾ ಮತ್ತು ಮೆಕ್ಸಿಕೊ ಆಕ್ರಮಿಸಿಕೊಂಡಿವೆ.[೧೬] ಶತಾವರಿಯ ಅಗ್ರಗಣ್ಯ ಆಮದುದಾರ ದೇಶಗಳಲ್ಲಿ (2004) ಅಮೆರಿಕ ಸಂಯುಕ್ತ ಸಂಸ್ಥಾನಗಳು (92,405 ಟನ್ನುಗಳು), ಹಾಗೂ ನಂತರದ ಸ್ಥಾನಗಳಲ್ಲಿ ಐರೋಪ್ಯ ಒಕ್ಕೂಟ (ಬಾಹ್ಯ ವ್ಯಾಪಾರ) (18,565 ಟನ್ನುಗಳು), ಮತ್ತು ಜಪಾನ್‌ (17,148 ಟನ್ನುಗಳು) ಸೇರಿದ್ದವು.[೧೭] 2005ರ ವರ್ಷದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಉತ್ಪಾದನೆಯು ಪ್ರಾರಂಭವಾಯಿತು 218.5 square kilometres (54,000 acres) ಮತ್ತು 90,200 ಟನ್ನುಗಳಷ್ಟು[೧೮] ಇಳುವರಿಯೊಂದಿಗೆ ವಿಶ್ವದ ಮೂರನೇ ಅತಿದೊಡ್ಡ ಉತ್ಪಾದಕನೆಂಬ ಹೆಸರು ಅವುಗಳ ಪಾಲಾಯಿತು. ಇದಕ್ಕೂ ಮುಂಚಿನ ಸ್ಥಾನಗಳಲ್ಲಿ ಚೀನಾ (5,906,000 ಟನ್ನುಗಳು) ಹಾಗೂ ಪೆರು (206,030 ಟನ್ನುಗಳು) ದೇಶಗಳಿದ್ದವು.[೧೯] ಕ್ಯಾಲಿಫೋರ್ನಿಯಾ, ಮಿಚಿಗನ್‌, ಮತ್ತು ವಾಷಿಂಗ್ಟನ್‌ಗಳಲ್ಲಿ U.S. ಉತ್ಪಾದನೆಯನ್ನು ಕೇಂದ್ರೀಕರಿಸಲಾಯಿತು.[೧೮] ಕ್ಯಾಲಿಫೋರ್ನಿಯಾದ ಸ್ಯಾಕ್ರೊಮೆಂಟೊ-ಸ್ಯಾನ್ ಜೊವಾಕಿನ್ ನದಿಯ ನದೀ ಮುಖಜಭೂಮಿ ವಲಯದಲ್ಲಿ ಈ ಬೆಳೆಯು ಗಮನಾರ್ಹವಾದ ಪ್ರಗತಿಯನ್ನು ಸಾಧಿಸಿದ್ದು, ಇದರ ಸಂಭ್ರಮಾಚರಣೆಗಾಗಿ ಸ್ಟಾಕ್‌ಟನ್‌ ನಗರವು ಪ್ರತಿವರ್ಷವೂ ಒಂದು ಮೇಳವನ್ನು ಹಮ್ಮಿಕೊಳ್ಳುತ್ತದೆ. ಇದೇ ರೀತಿಯಲ್ಲಿ ಮಿಚಿಗನ್‌ನ ಹಾರ್ಟ್‌ ನಗರವು ಒಂದು ಮೆರವಣಿಗೆ ಹಾಗೂ ಶತಾವರಿ ರಾಣಿಯ ವೇಷದೊಂದಿಗೆ ಮೇಳವನ್ನು ಸಂಪೂರ್ಣಗೊಳಿಸುತ್ತದೆ. ವೊರ್ಸೆಸ್ಟರ್‌ಷೈರ್‌ನಲ್ಲಿನ ಈವ್‌ಶಾಮ್‌ ಕಣಿವೆಯು ಉತ್ತರ ಯುರೋಪ್‌ನೊಳಗಿನ ಅತಿದೊಡ್ಡ ಉತ್ಪಾದಕ ಎಂದು ಪ್ರಚಾರ ಪಡೆದಿದೆ. ಸ್ಟಾಕ್‌ಟನ್‌ನಂತೆಯೇ ಸಂಭ್ರಮಾಚರಣೆಯಲ್ಲಿ ತೊಡಗುವ ಈ ಪ್ರದೇಶವು, ಪ್ರತಿವರ್ಷವೂ ಒಂದು ವಾರದ ಅವಧಿಯ ಮೇಳವನ್ನು ಹಮ್ಮಿಕೊಳ್ಳುತ್ತದೆ. ಅತ್ಯುತ್ತಮ ಗುಣಮಟ್ಟದ ಬೆಳೆಗಳ ಹರಾಜುಗಳು ಮತ್ತು ಬ್ರಿಟಿಷ್‌ ಶತಾವರಿ ಮೇಳದ ಒಂದು ಭಾಗವಾಗಿ ಸ್ಥಳೀಯರು ಶತಾವರಿಯ ಚೂಪುಕಾಂಡಗಳಂತೆ ವೇಷಧರಿಸಿಕೊಳ್ಳುವುದನ್ನು ಕಣಿವೆಯಲ್ಲಿನ ಈ ಮೇಳವು ಒಳಗೊಳ್ಳುತ್ತದೆ.[೨೦] ನ್ಯೂರೆಂಬರ್ಗ್‌ನ ಬವೇರಿಯನ್‌ ನಗರದಲ್ಲೂ ಒಂದು ನಗರ ಮೇಳವು ಅಸ್ತಿತ್ವದಲ್ಲಿದ್ದು, ಏಪ್ರಿಲ್‌ ತಿಂಗಳಿನಲ್ಲಿ ಒಂದು ವಾರದವರೆಗೆ ಇದನ್ನು ನಡೆಸಲಾಗುತ್ತದೆ. ಸ್ಥಳೀಯವಾಗಿ ಬೆಳೆಯಲಾದ ಬಿಳಿ ಶತಾವರಿ, ಅಂದರೆ "ಸ್ಪಾರ್ಗೆಲ್‌"ನ ಗೌರವಾರ್ಥವಾಗಿ ಈ ಮೇಳವನ್ನು ನಡೆಸಲಾಗುತ್ತದೆ.ಆ ವಲಯದಲ್ಲಿರುವ, ಅತಿವೇಗವಾಗಿ ಸ್ಪಾರ್ಗೆಲ್‌ನ್ನು ಕೀಳುವವರನ್ನು ಕಂಡುಹಿಡಿಯಲು ಅಲ್ಲಿ ಒಂದು ಸ್ಪರ್ಧೆಯೂ ಇರುತ್ತದೆ. ಗುಣಗ್ರಾಹಿ ಬೆಂಬಲಕ್ಕೆ ನೆರವಾಗುವ ದೃಷ್ಟಿಯಿಂದ ಪ್ರೇಕ್ಷಕರು ಹೇರಳ ಪ್ರಮಾಣದಲ್ಲಿ ಸ್ಥಳೀಯ ಮದ್ಯಗಳು ಹಾಗೂ ಬಿಯರ್‌ನ್ನು ಸೇವಿಸುವುದನ್ನು ಈ ಸ್ಪರ್ಧೆಯ ಅವಧಿಯಲ್ಲಿ ಸಾಮಾನ್ಯವಾಗಿ ಕಾಣಬಹುದು.[೨೧]

ದೇಶೀಯ ಹೆಸರುಗಳು ಮತ್ತು ವ್ಯುತ್ಪತ್ತಿ

 src=
ಆಸ್ಟ್ರೇಲಿಯಾದ ವಿಕ್ಟೋರಿಯಾದ ಮಿಲ್‌ಡ್ಯೂರಾದಲ್ಲಿನ ಶತಾವರಿ

ಆಸ್ಪ್ಯಾರಗಸ್‌ ಅಫಿಷಿನಾಲಿಸ್‌ ಎಂಬುದು ಸರಳವಾಗಿ "ಆಸ್ಪ್ಯಾರಗಸ್‌" (ಶತಾವರಿ) ಎಂಬ ಹೆಸರಿನಿಂದಲೇ ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ. ಆದರೆ "ಆಸ್ಪ್ಯಾರಗಸ್‌" ಎಂಬ ಹೆಸರನ್ನು ತಳುಕುಹಾಕಿಕೊಂಡಿರುವ ಒಂದಷ್ಟು ಸಂಬಂಧಿಸದ ಸಸ್ಯಜಾತಿಯೊಂದಿಗೆ ಇದನ್ನು ಗುರುತಿಸಿ ಗೊಂದಲಕ್ಕೀಡಾಗುವ ಸಾಧ್ಯತೆಗಳಿವೆ. ಉದಾಹರಣೆಗೆ, ಆರ್ನಿಥೋಗ್ಯಾಲಂ ಪೈರೆನೈಕಮ್‌ ಎಂಬ ಪ್ರಭೇದವನ್ನು ಅದರ ಖಾದ್ಯ ಚಿಗುರುಗಳಿಂದಾಗಿ "ಪ್ರಷ್ಯನ್‌ ಆಸ್ಪ್ಯಾರಗಸ್‌" (ಪ್ರಷ್ಯನ್ ಶತಾವರಿ) ಎಂದು ಕರೆಯಲಾಗುತ್ತದೆ."ಆಸ್ಪ್ಯಾರಗಸ್‌" ಎಂಬ ಆಂಗ್ಲಪದವು ಶಿಷ್ಟ ಲ್ಯಾಟಿನ್‌ನಿಂದ ತನ್ನ ಹೆಸರನ್ನು ಪಡೆದಿದ್ದರೂ, ಸದರಿ ಸಸ್ಯವು ಹಿಂದೊಮ್ಮೆ ಆಂಗ್ಲಭಾಷೆಯಲ್ಲಿ ಸ್ಪೆರೇಜ್‌ ಎಂಬ ಹೆಸರಿನಿಂದಲೇ ಕರೆಯಲ್ಪಡುತ್ತಿತ್ತು. ಈ ಹೆಸರು ಮಧ್ಯಯುಗದ ಲ್ಯಾಟಿನ್‌ ಪದವಾದ ಸ್ಪ್ಯಾರಗಸ್‌ ನಿಂದ ಬಂದಿತ್ತು. ಸ್ವತಃ ಈ ಪದವು ಗ್ರೀಕ್‌‌ ಭಾಷೆಯ ಆಸ್ಫಾರಗೊಸ್‌ ಅಥವಾ ಆಸ್ಪ್ಯಾರಗೊಸ್‌ ನಿಂದ ಜನ್ಯವಾಗಿದ್ದರೆ, ಗ್ರೀಕ್‌ ಪದವು ಪರ್ಷಿಯನ್‌ ಭಾಷೆಯ ಆಸ್ಪ್ಯಾರಾಗ್‌ ನಿಂದ ಹುಟ್ಟಿಕೊಂಡಿದೆ. ಪರ್ಷಿಯನ್ ಭಾಷೆಯಲ್ಲಿ ಆಸ್ಪ್ಯಾರಾಗ್ ಎಂದರೆ "ಮೊಳಕೆ" ಅಥವಾ "ಚಿಗುರು" ಎಂದರ್ಥ.

 src=
ಕೆನಡಾದ ಸಾಸ್ಕಚೆವಾನ್‌ ಪ್ರಾಂತದಲ್ಲಿ ಸ್ಥಳೀಯವಾದ ಪ್ರೌಢ ಶತಾವರಿಯು ಬೀಜಕೋಶಗಳನ್ನು ತೋರಿಸುತ್ತಿರುವುದು.

ಕೆಲವೊಂದು ಪ್ರದೇಶಗಳಲ್ಲಿ "ಗುಬ್ಬಚ್ಚಿ ಹುಲ್ಲು" ಎಂದು ಕರೆಯಲಾಗುವ ಸಸ್ಯದೊಂದಿಗೆ ಶತಾವರಿಯ ಗ್ರಂಥಪಾಠವು ಕೆಡಿಸಲ್ಪಟ್ಟಿತ್ತು; ವಾಸ್ತವವಾಗಿ, "ಗುಬ್ಬಚ್ಚಿ-ಹುಲ್ಲು ಸಸ್ಯವು ತುಂಬಾ ಸಾರ್ವತ್ರಿಕವಾಗಿದ್ದು, ಇದರ ಪ್ರಭಾವ ಎಷ್ಟಿದೆಯೆಂದರೆ ಠೀವಿ ಮತ್ತು ಡೌಲಿನ ಒಂದು ಲಕ್ಷಣವನ್ನು ಶತಾವರಿ ಯು ಹೊಂದಿದೆ" ಎಂದು ಜಾನ್‌ ವಾಕರ್‌ ಎಂಬಾತ 1791ರಲ್ಲಿ ಬರೆದಿರುವುದನ್ನು ಆಕ್ಸ್‌ಫರ್ಡ್‌ ಇಂಗ್ಲಿಷ್‌ ಡಿಕ್ಷ್‌ನರಿಯು ಉಲ್ಲೇಖಿಸುತ್ತದೆ. ಗ್ಲೌಸೆಸ್ಟರ್‌ಷೈರ್‌ ಮತ್ತು ವೊರ್ಸೆಸ್ಟರ್‌ಷೈರ್‌ನಲ್ಲಿ ಇದನ್ನು ಕೇವಲ "ಹುಲ್ಲು" ಎಂದೇ ಕರೆಯಲಾಗುತ್ತದೆ. ಈ ಪದದ ಮತ್ತೊಂದು ಜನಪ್ರಿಯವಾದ ಆಡುಮಾತಿನ ಮಾರ್ಪಾಡೆಂದರೆ, ಟೆಕ್ಸಾಸ್‌ನ ಭಾಗಗಳಲ್ಲಿ ಅತಿ ಸಾಮಾನ್ಯವಾಗಿ ಬಳಕೆಯಲ್ಲಿರುವ "ಆಸ್ಪ್ಯಾರ್‌ ಹುಲ್ಲು" (ಆಸ್ಪ್ಯಾರ್‌ ಗ್ರಾಸ್‌) ಅಥವಾ "ಆಸ್ಪರ್‌ ಹುಲ್ಲು" (ಆಸ್ಪರ್‌ ಗ್ರಾಸ್‌) ಎಂಬ ಪದ.ಮಿಡ್ಲ್‌‌ವೆಸ್ಟ್‌ ಅಮೆರಿಕ ಸಂಯುಕ್ತ ಸಂಸ್ಥಾನಗಳು ಹಾಗೂ ಅಪ್ಪಾಲೇಚಿಯಾದಲ್ಲಿ, "ಸ್ಪಾರ್‌ ಹುಲ್ಲು" (ಸ್ಪಾರ್‌ ಗ್ರಾಸ್‌) ಎಂಬುದೊಂದು ಸಾಮಾನ್ಯ ಬಳಕೆಯ ಮಾತು ಆಗಿದೆ. ಹಣ್ಣಿನ ಚಿಲ್ಲರೆ ವ್ಯಾಪಾರಿಗಳ ವಲಯದಲ್ಲಿ ಶತಾವರಿಯು ಸಾಮಾನ್ಯವಾಗಿ "ಗುಬ್ಬಚ್ಚಿಗಳ ಕರುಳುಗಳು" (ಸ್ಪ್ಯಾರೋಸ್‌ ಗಟ್ಸ್‌) ಎಂದೇ ಜನಜನಿತ. ಪದದ ವ್ಯುತ್ಪತ್ತಿಯ ದೃಷ್ಟಿಯಿಂದ ಇದು "ಗುಬ್ಬಚ್ಚಿ ಹುಲ್ಲು" ಎಂಬ ಹಳೆಯ ಪದದಿಂದ ಪ್ರತ್ಯೇಕವಾಗಿ ಕಂಡರೂ, ಒಮ್ಮುಖವಾಗಿರುವ ಭಾಷಾ ವಿಕಸನವನ್ನು ಇದು ತೋರಿಸುತ್ತದೆ.ಶತಾವರಿಯನ್ನು ಫ್ರೆಂಚ್‌ ಮತ್ತು ಡಚ್‌ ಭಾಷೆಯಲ್ಲಿ ಆಸ್ಪರ್ಗೆ ಎಂದೂ, ಇಟಾಲಿಯನ್‌ ಭಾಷೆಯಲ್ಲಿ ಆಸ್ಪ್ಯಾರಗೊ (ಹಳೆಯ ಇಟಾಲಿಯನ್‌ ಭಾಷೆಯಲ್ಲಿ ಆಸ್ಪ್ಯಾರಗಿಯೊ ) ಎಂದೂ, ಪೋರ್ಚುಗೀಸ್‌ ಭಾಷೆಯಲ್ಲಿ ಎಸ್ಪಾರ್ಗೊ ಹೋರ್ಟೆನ್ಸ್‌ ಎಂದೂ, ಸ್ಪ್ಯಾನಿಷ್‌ ಭಾಷೆಯಲ್ಲಿ ಎಸ್ಪ್ಯಾರ್ರಾಗೊ ಎಂದೂ, ಜರ್ಮನ್‌ ಭಾಷೆಯಲ್ಲಿ ಸ್ಪಾರ್ಗೆಲ್‌ ಎಂದೂ, ಹಂಗೇರಿಯನ್‌ ಭಾಷೆಯಲ್ಲಿ ಸ್ಪ್ಯಾರ್ಗಾ ಎಂದೂ ಕರೆಯಲಾಗುತ್ತದೆ.ಶತಾವರಿ ಎಂದು ಈಗ ಕರೆಯಲಾಗುತ್ತಿರುವುದು ಆಸ್ಪ್ಯಾರಗಸ್‌ಗೆ ಸಂಸ್ಕೃತದಲ್ಲಿರುವ ಹೆಸರು. ಭಾರತದಲ್ಲಿ ಚಾರಿತ್ರಿಕವಾಗಿ ಇದನ್ನು ಆಯುರ್ವೇದೀಯ ಔಷಧಿಗಳ ಒಂದು ಭಾಗವಾಗಿ ಬಳಸುತ್ತಾ ಬರಲಾಗಿದೆ. ಕನ್ನಡ ಭಾಷೆಯಲ್ಲಿ, ಇದು ಆಸಡಿ, ಮಜ್ಜಿಗೆಗಡ್ಡೆ ಅಥವಾ ಸಿಪಾರಿಬೇರುಬಳ್ಳಿ ಎಂಬ ಹೆಸರುಗಳಿಂದ ಜನಜನಿತವಾಗಿದೆ. ಥೈಲೆಂಡ್‌ನಲ್ಲಿ ಇದು ನೋ ಮಾಯ್‌ ಫರಾಂಗ್‌ (ಥಾಯ್:หน่อไม้ฝรั่ง) ಎಂದೇ ಹೆಸರುವಾಸಿ. ಇದರ ಅಕ್ಷರಶಃ ಅರ್ಥ, "ಯುರೋಪಿನ ಬಿದಿರು ಚಿಗುರುಗಳು" ಎಂಬುದಾಗಿದೆ. ಹಸಿರು ಶತಾವರಿಯನ್ನು ಸಾಮಾನ್ಯವಾಗಿ ಥಾಯ್‌ ಪಾಕವಿಧಾನದಲ್ಲಿ ಬಳಸಲಾಗುತ್ತದೆ.

ಮೂತ್ರ

ಶತಾವರಿಯನ್ನು ಸೇವಿಸುವುದರಿಂದ ತಿನ್ನುವವರ ಮೂತ್ರದ ಮೇಲಾಗುವ ಪ್ರಭಾವವನ್ನು ಬಹಳ ಕಾಲದಿಂದ ಗಮನಿಸಿಕೊಂಡು ಬರಲಾಗಿದೆ:

"ಶತಾವರಿಯು... ಒಂದು ಕೊಳೆತು ನಾರುವ ವಾಸನೆಯೊಂದಿಗೆ ಮೂತ್ರದ ಮೇಲೆ ಪ್ರಭಾವ ಬೀರುತ್ತದೆ (ವಿಶೇಷವಾಗಿ ಬಿಳಿ ಬಣ್ಣದಲ್ಲಿರುವಾಗಲೇ ಅದನ್ನು ಕತ್ತರಿಸಿದರೆ). ಆದ್ದರಿಂದ ಅವು ಮೂತ್ರಪಿಂಡಗಳಿಗೆ ಅನುಕೂಲಕರವಲ್ಲ ಎಂದು ಕೆಲವೊಂದು ವೈದ್ಯರು ಶಂಕಿಸುತ್ತಾರೆ. ಅವಕ್ಕೆ ವಯಸ್ಸಾಗುತ್ತಾ ಶಾಖೋಪಶಾಖೆಗಳಾಗಿ ಹರಡಿಕೊಳ್ಳಲು ಪ್ರಾರಂಭಿಸಿದಾಗ, ಈ ಗುಣವನ್ನು ಅವು ಕಳೆದುಕೊಳ್ಳುತ್ತವೆ; ಆದರೆ ಆ ವೇಳೆಗೆ ಅವು ಅಷ್ಟೊಂದು ಹಿತಕರವಾಗಿ ಉಳಿದಿರುವುದಿಲ್ಲ"[೨೨]

ಮಾರ್ಸೆಲ್‌ ಪ್ರೌಸ್ಟ್‌ ಎಂಬಾತ, ಶತಾವರಿಯು "...ನನ್ನ ಮೂತ್ರಪಾತ್ರೆಯನ್ನು ಸುಗಂಧದ್ರವ್ಯದ ಒಂದು ಸೀಸೆಯಾಗಿ (ಫ್ಲಾಸ್ಕ್‌ ಆಗಿ) ಮಾರ್ಪಡಿಸುತ್ತದೆ" ಎಂದು ಹೇಳಿಕೊಂಡಿದ್ದಾನೆ.[೨೩]ಬಹಳಷ್ಟು ಜನರಿಗೆ ಶತಾವರಿ ಮೂತ್ರದ ವಿದ್ಯಮಾನದ ಕುರಿತು ಅರಿವಿರಲಿಲ್ಲ ಎಂದು 1950ರ ದಶಕದಿಂದ ಬಂದಿರುವ ಒಂದು ಅವಲೋಕನದ ಸಾಕ್ಷ್ಯವು ತೋರಿಸಿದೆ. ಎಲ್ಲಾ (ಅಥವಾ ಕೇವಲ ಕೆಲವು) ಜನರು ವಾಸನೆಯನ್ನು ಹೊರಹೊಮ್ಮಿಸುತ್ತಾರೆಯೇ ಅಥವಾ ಇಲ್ಲವೇ, ಮತ್ತು ಎಲ್ಲಾ (ಅಥವಾ ಕೇವಲ ಕೆಲವು) ಜನರು ವಾಸನೆಯನ್ನು ಗುರುತಿಸುತ್ತಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಮೂಲತಃ ಈ ರೀತಿಯದೊಂದು ಯೋಚನೆ ಬರಲು ಕಾರಣವೇನೆಂದರೆ, ಕೆಲವೊಂದು ಜನಸಮುದಾಯವು ಇತರರಿಗಿಂತ ವಿಭಿನ್ನವಾಗಿ ಶತಾವರಿಯನ್ನು ಜೀರ್ಣಿಸಿಕೊಂಡಿದ್ದರಿಂದಾಗಿ ಕೆಲವೊಂದು ಜನ ಶತಾವರಿಯನ್ನು ತಿಂದ ನಂತರ ವಾಸನೆಯುಳ್ಳ ಮೂತ್ರವನ್ನು ವಿಸರ್ಜಿಸಿದರೆ, ಮತ್ತೆ ಕೆಲವರದು ಆ ರೀತಿ ಇರಲಿಲ್ಲ.ಆದಾಗ್ಯೂ, 1980ರ ದಶಕದಲ್ಲಿ ಫ್ರಾನ್ಸ್‌,[೨೪] ಚೀನಾ ಮತ್ತು ಇಸ್ರೇಲ್‌ ವತಿಯಿಂದ ನಡೆಸಲ್ಪಟ್ಟ ಮೂರು ಅಧ್ಯಯನಗಳು ಒಂದಷ್ಟು ಫಲಿತಾಂಶವನ್ನು ಪ್ರಕಟಿಸಿದವು. ಶತಾವರಿಯ ಬಳಕೆಯಿಂದಾಗಿ ವಾಸನೆಯುಕ್ತ ಮೂತ್ರವನ್ನು ಉತ್ಪಾದಿಸುವುದು ಒಂದು ಸಾರ್ವತ್ರಿಕ ಮಾನವ ಲಕ್ಷಣವಾಗಿತ್ತು ಎಂಬುದನ್ನು ಆ ಫಲಿತಾಂಶಗಳು ತೋರಿಸಿದ್ದವು. ಇಸ್ರೇಲಿನ ಅಧ್ಯಯನದ ಅನುಸಾರ, ತನ್ನ 307 ಪರೀಕ್ಷಾರ್ಥ ಮಂದಿಯ ಪೈಕಿ 'ಶತಾವರಿ ಮೂತ್ರ'ದ ವಾಸನೆಯನ್ನು ಗ್ರಹಿಸಬಲ್ಲ ಎಲ್ಲರೂ ಶತಾವರಿಯನ್ನು ಸೇವಿಸಿದ್ದ ಯಾರದೇ ಮೂತ್ರದಲ್ಲಿನ ಸದರಿ ವಾಸನೆಯನ್ನು ಪತ್ತೆಹಚ್ಚಬಲ್ಲವರಾಗಿದ್ದರು; ಒಂದು ವೇಳೆ ಆ ವಾಸನೆಯನ್ನು ಉತ್ಪಾದಿಸಿದ್ದ ವ್ಯಕ್ತಿ ಸ್ವತಃ ಅದನ್ನು ಪತ್ತೆಹಚ್ಚಲು ಆಗದಿದ್ದರೂ ಇವರಿಗೆ ಸಾಧ್ಯವಾಗಿತ್ತು ಎಂಬ ಅಂಶವು ಕಂಡುಬಂತು.[೨೫] ಹೀಗಾಗಿ, ಶತಾವರಿಯನ್ನು ಸೇವಿಸಿದ ನಂತರ ಬಹುತೇಕ ಮಂದಿ ವಾಸನೆಯುಕ್ತ ಸಂಯುಕ್ತಗಳನ್ನು ಉತ್ಪಾದಿಸುತ್ತಾರಾದರೂ, ಅವರ ಪೈಕಿ ಕೇವಲ 22%ನಷ್ಟು ಜನರು ಆ ವಾಸನೆಯನ್ನು ಗ್ರಹಿಸಲು ಅಥವಾ ಘ್ರಾಣಿಸಲು ಅಗತ್ಯವಾಗಿರುವ ಅಲಿಂಗ ವರ್ಣತಂತುವಿನ (ಆಟೋಸೋಮಲ್‌) ಜೀನ್‌ಗಳನ್ನು ಹೊಂದಿರುತ್ತಾರೆ ಎಂದು ನಂಬಲಾಗಿದೆ.[೨೬][೨೭][೨೮]

ರಸಾಯನ ಶಾಸ್ತ್ರ

ಶತಾವರಿಯಲ್ಲಿನ ನಿಗದಿತ ಸಂಯುಕ್ತಗಳು ಚಯಾಪಚಯ ಕ್ರಿಯೆಗೊಳಗಾಗಿ ಮೂತ್ರಕ್ಕೆ ಒಂದು ಪ್ರತ್ಯೇಕವಾದ ವಾಸನೆಯನ್ನು ನೀಡುತ್ತವೆ. ಥಯಾಲ್‌ಗಳು, ಥಯೋ ಎಸ್ಟರುಗಳು, ಮತ್ತು ಅಮೋನಿಯಾವನ್ನೊಳಗೊಂಡಂತೆ, ಗಂಧಕವನ್ನು ಒಳಗೊಂಡಿರುವ, ಸರಳ ಸಂಯುಕ್ತಗಳನ್ನಾಗಿ ಒಡೆಯುವ ಅನೇಕ ಉತ್ಪನ್ನಗಳೇ ಈ ಪ್ರತ್ಯೇಕವಾದ ವಾಸನೆಗೆ ಕಾರಣ.[೨೯]ಈ ವಾಸನೆಗೆ ಕಾರಣವಾದ ಬಾಷ್ಪಶೀಲ ಸಾವಯವ ಸಂಯುಕ್ತಗಳನ್ನು ಈ ಕೆಳಕಂಡಂತೆ ಗುರುತಿಸಲಾಗಿದೆ:[೩೦][೩೧]

ವ್ಯಕ್ತಿನಿಷ್ಠವಾಗಿ ಹೇಳುವುದಾದರೆ, ಮೊದಲೆರಡು ಸಂಯುಕ್ತಗಳು ಅತ್ಯಂತ ಘಾಟುವಾಸನೆಯನ್ನು ಹೊಂದಿದ್ದು, ಕೊನೆಯ ಎರಡು (ಗಂಧಕ-ಆಕ್ಸಿಡೀಕೃತ ಅಥವಾ ಗಂಧಕ-ಉತ್ಕರ್ಷಿತ) ಸಂಯುಕ್ತಗಳು ಒಂದು ಸುವಾಸನೆಯ ಪರಿಮಳವನ್ನು ನೀಡುತ್ತವೆ. ಈ ಸಂಯುಕ್ತಗಳ ಒಂದು ಸಮ್ಮಿಶ್ರಣವು ಒಂದು "ಪುನಾರಚಿತ ಶತಾವರಿ ಮೂತ್ರದ" ವಾಸನೆಯನ್ನು ರೂಪಿಸುತ್ತವೆ. ಇದನ್ನು 1891ರಲ್ಲಿ ಮಾರ್ಸೆಲಿ ನೆನ್‌ಕಿ ಎಂಬಾತ ಮೊಟ್ಟಮೊದಲು ಪತ್ತೆ ಹಚ್ಚಿ, ಇದರ ವಾಸನೆಗೆ ಮೀಥೇನೆಥಿಯಾಲ್‌ ಸಂಯುಕ್ತವೇ ಕಾರಣ ಎಂದು ತಿಳಿಸಿದ.[೩೨]ಶತಾವರಿಗೆ ಅನನ್ಯವಾಗಿರುವ ಗಂಧಕವನ್ನು ಈ ಸಂಯುಕ್ತಗಳು ಮಾತ್ರವೇ ಒಳಗೊಂಡಿರುವುದರಿಂದ, ಶತಾವರಿಯಲ್ಲಿ ಇವು ಆಸ್ಪ್ಯಾರಗ್ಯುಸಿಕ್‌ ಆಮ್ಲ ಮತ್ತು ಅದರ ಜನ್ಯ ವಸ್ತುಗಳಾಗಿ ಹುಟ್ಟಿಕೊಳ್ಳುತ್ತವೆ. ಈ ಸಂಯುಕ್ತಗಳು ಎಳೆಯ ಶತಾವರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆಯಾದ್ದರಿಂದ, ಎಳೆಯ ಶತಾವರಿಯನ್ನು ಸೇವಿಸಿದ ನಂತರ ವಾಸನೆ ಹೆಚ್ಚಾಗಿ ಎದ್ದುಕಾಣುತ್ತದೆ ಎಂಬ ಅಭಿಪ್ರಾಯಕ್ಕೆ ಅದು ಅನುಗುಣವಾಗಿದೆ.

ಚಯಾಪಚಯ ಕ್ರಿಯೆ

ಈ ಸಂಯುಕ್ತಗಳನ್ನು ಉತ್ಪಾದಿಸಲು ಅಗತ್ಯವಿರುವ ಜೈವಿಕ ಕಾರ್ಯವಿಧಾನವು ಅಷ್ಟೊಂದು ಸ್ಪಷ್ಟವಾಗಿಲ್ಲ.ಆಹಾರ ಸೇವನೆಯಾದ 15–30 ನಿಮಿಷಗಳೊಳಗೆ ಮೂತ್ರದ ವಾಸನೆಯ ದೃಢವಾದ ಆರಂಭದ ವೇಗವು ಕಂಡುಬರುತ್ತದೆ ಎಂದು ಅಂದಾಜಿಸಲಾಗಿದೆ.[೩೩]ವಾಟರ್‌ಲೂ ವಿಶ್ವವಿದ್ಯಾಲಯದ ಡಾ. ಆರ್‌. ಮೆಕ್‌ಲೆಲ್ಲಾನ್‌ ಸಂಶೋಧನೆಯನ್ನು ಸಂಪೂರ್ಣಗೊಳಿಸಿ, ಪರಿಶೀಲಿಸಿದ್ದಾರೆ.

ಉಲ್ಲೇಖಗಳು

 src=
ಶರತ್ಕಾಲದಲ್ಲಿ ಶತಾವರಿಯ ಎಲೆಗೊಂಚಲು ಉಜ್ಜ್ವಲ ಕೆಂಪು ಬಣ್ಣದಲ್ಲಿ ಹೊಳೆಯುತ್ತದೆ
  1. ೧.೦ ೧.೧ ಫ್ಲೋರಾ ಯುರೋಪಿಯಾ: ಆಸ್ಪ್ಯಾರಗಸ್‌ ಅಫಿಷಿನಾಲಿಸ್‌
  2. ಯುರೊ+ಮೆಡ್ ಪ್ಲಾಂಟ್‌ಬೇಸ್‌ ಪ್ರಾಜೆಕ್ಟ್‌: ಆಸ್ಪ್ಯಾರಗಸ್‌ ಅಫಿಷಿನಾಲಿಸ್‌
  3. ಜರ್ಮ್‌ಪ್ಲಾಸ್ಮ್‌ ರಿಸೋರ್ಸಸ್‌ ಇನ್ಫರ್ಮೇಷನ್ ನೆಟ್‌ವರ್ಕ್: ಅಸ್ಪ್ಯಾರಗಸ್ ಅಫಿಷಿನಾಲಿಸ್‌
  4. ಗ್ರಬ್ಬೆನ್‌, ಜಿ.ಜೆ.ಎಚ್‌. & ಡೆಂಟನ್‌, ಒ.ಎ. (2004) ಪ್ಲಾಂಟ್‌ ರಿಸೋರ್ಸಸ್‌ ಆಫ್ ಟ್ರಾಪಿಕಲ್ ಆಫ್ರಿಕಾ 2. ವೆಜಿಟಬಲ್ಸ್‌. PROTA ಫೌಂಡೇಷನ್‌, ವೇಗನಿಂಜೆನ್‌; ಬ್ಯಾಖುಯ್ಸ್‌, ಲೀಡೆನ್; CTA, ವೇಗನಿಂಜೆನ್‌.
  5. ೫.೦ ೫.೧ ಬ್ಲೇಮಿ, ಎಂ. & ಗ್ರೇ-ವಿಲ್ಸನ್‌, ಸಿ. (1989). ಫ್ಲೋರಾ ಆಫ್ ಬ್ರಿಟನ್‌ ಅಂಡ್‌ ನಾರ್ದರ್ನ್‌ ಯುರೋಪ್ . ISBN 0-340-40170-2
  6. ಫ್ಲೋರಾ ಆಫ್ NW ಯುರೋಪ್: ಆಸ್ಪ್ಯಾರಗಸ್‌ ಪ್ರೊಸ್ಟ್ರೇಟಸ್
  7. ಜರ್ಮ್‌ಪ್ಲಾಸ್ಮ್‌ ರಿಸೋರ್ಸಸ್‌ ಇನ್ಫರ್ಮೇಷನ್ ನೆಟ್‌ವರ್ಕ್‌: ಆಸ್ಪ್ಯಾರಗಸ್‌ ಪ್ರೊಸ್ಟ್ರೇಟಸ್‌
  8. Vaughan, J.G. (1997). The New Oxford Book of Food Plants. Oxford University Press. Unknown parameter |coauthors= ignored (|author= suggested) (help)
  9. ಆಸ್ಪ್ಯಾರಗಸ್‌ ಲೈಮ್‌ ಪೈ ಪಾಕವಿಧಾನ
  10. ಬ್ರಿಟಿಷ್‌ ಶತಾವರಿ
  11. http://health.learninginfo.org/asparagus-nutrition.htm
  12. "BBC - Food - Glossary - 'S'". BBC Online. Archived from the original on 2012-08-03. Retrieved 2007-06-08.
  13. Molly Spence. "Asparagus: The King of Vegetables" (DOC). German Agricultural Marketing Board. Retrieved 2007-02-26.
  14. ಆಕ್ಸ್‌ಫರ್ಡ್‌ ಟೈಮ್ಸ್‌ : "ಟೈಮ್‌ ಟು ಗ್ಲೋರಿ ಇನ್‌ ಆಸ್ಪ್ಯಾರಗಸ್‌ ಎಗೇನ್‌".
  15. http://www.ibiblio.org/pfaf/cgi-bin/arr_html?Asparagus+officinalis
  16. United States Department of Agriculture. "World Asparagus Situation & Outlook" (PDF). World Horticultural Trade & U.S. Export Opportunities. Retrieved 2007-02-27.
  17. ಜಾಗತಿಕ ವ್ಯಾಪಾರ ಭೂಪಟ ಮತ್ತು U.S. ಸೆನ್ಸಸ್‌ ಬ್ಯೂರೋದ ಅಂಕಿ-ಅಂಶಗಳ ಅನುಸಾರವಾಗಿ
  18. ೧೮.೦ ೧೮.೧ USDA (2006). Vegetables 2005 Summary. National Agricultural Statistics Service. Unknown parameter |month= ignored (help)
  19. "Food and Agriculture Organisation Statistics (FAOSTAT)". Retrieved 2007-11-11.
  20. "British Aparagus Festival".
  21. "Official internet portal of the City of Nuremberg".
  22. Arbuthnot J (1735), An Essay Concerning the Nature of Aliments 3rd ed., J. Tonson, pp. 64261–262 Unknown parameter |city= ignored (help)
  23. ಫ್ರೆಂಚ್‌ನಿಂದ "[...] ಚೇಂಜ್ ಮೈ ಚೇಂಬರ್ ಪಾಟ್‌ ಇನ್‌ಟು ಎ ಜಾರ್ ಆಫ್ ಪರ್‌ಫ್ಯೂಮ್‌, "(1) ಡು ಕೋಟ್‌ ಡೆ ಸ್ವಾನ್‌, ಗ್ಯಾಲಿಮಾರ್ಡ್‌, 1988.
  24. C. RICHER1, N. DECKER2, J. BELIN3, J. L. IMBS2, J. L. MONTASTRUC3 & J. F. GIUDICELLI (May 1989). "Odorous urine in man after asparagus". Br J. Clin. Pharmac.CS1 maint: multiple names: authors list (link)
  25. S. C. MITCHELL (May 1989). "Asparagus and malodorous urine". Br J. Clin. Pharmac.
  26. "The scientific chef: asparagus pee". The Guardian. September 23, 2005. Retrieved 2007-04-21.
  27. Hannah Holmes. "Why Asparagus Makes Your Pee Stink". Discover.com.
  28. Lison M, Blondheim SH, Melmed RN. (1980). "A polymorphism of the ability to smell urinary metabolites of asparagus". Br Med J. 281: 1676. doi:10.1136/bmj.281.6256.1676. PMID 7448566.CS1 maint: multiple names: authors list (link)
  29. White RH. (1975). "Occurrence of S-methyl thioesters in urines of humans after they have eaten asparagus". Science. 189: 810–11. doi:10.1126/science.1162354. PMID 1162354.
  30. Waring RH, Mitchell SC and Fenwick GR (1987). "The chemical nature of the urinary odour produced by man after asparagus ingestion". Xenobiotica. 17: 1363–1371. PMID 3433805.
  31. ಫುಡ್‌ ಇಡಿಯಾಸಿಂಕ್ರಸೀಸ್‌: ಬೀಟ್‌ರೂಟ್‌ ಅಂಡ್‌ ಆಸ್ಪ್ಯಾರಗಸ್‌
  32. Nencki, Marceli (1891). "Ueber das vorkommen von methylmercaptan im menschlichen harn nach spargelgenuss". Arch Exp Path Pharmak. 28: 206–209. doi:10.1007/BF01824333.
  33. Somer, E. (August 14, 2000). "Eau D'Asparagus". WebMD. Retrieved 2006-08-31.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಶತಾವರಿ: Brief Summary ( Kannada )

provided by wikipedia emerging languages

ಆಸ್ಪ್ಯಾರಗಸ್‌ ಅಫಿಷಿನಾಲಿಸ್‌ ಎಂಬುದು ಆಸ್ಪ್ಯಾರಗಸ್‌ ಕುಲದಲ್ಲಿನ ಒಂದು ಹೂಬಿಡುವ ಸಸ್ಯಜಾತಿಯಾಗಿದ್ದು, ಶತಾವರಿ ಎಂದು ಹೆಸರಾಗಿರುವ ತರಕಾರಿಯನ್ನು ಅದರಿಂದ ಪಡೆಯಲಾಗುತ್ತದೆ. ಇದು ಯುರೋಪ್, ಉತ್ತರ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾದ ಬಹುತೇಕ ಭಾಗಗಳ ಸ್ಥಳೀಯ ಸಸ್ಯವಾಗಿದೆ. ಇದನ್ನು ಒಂದು ತರಕಾರಿ ಬೆಳೆಯಂತೆಯೂ ಈಗ ವ್ಯಾಪಕವಾಗಿ ಬೆಳೆಯಲಾಗುತ್ತಿದೆ.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು