ಕೆಂಬೂತ, (ಕೆಂಬೂತ-ಘನ - Greater Coucal or Crow Pheasant) (ವೈಜ್ಞಾನಿಕ ಹೆಸರು : Centropus sinensis) ಕೆಂಬೂತ, ಕಾಗೆ ಗಾತ್ರದ ಕೋಗಿಲೆ ಗಣಕ್ಕೆ ಸೇರಿದ ಒಂದು ಹಕ್ಕಿ ಪ್ರಭೇದ. ಕೋಗಿಲೆ (cuckoo) ಗಣಕ್ಕೆ ಸೇರಿದ್ದರೂ, ಕೋಗಿಲೆಯಂತೆ ಬೇರೆ ಹಕ್ಕಿಗಳ ಗೂಡಿನಲ್ಲಿ ಮೊಟ್ಟೆ ಇಡುವುದಿಲ್ಲ, ಹಾಗಾಗಿ ಇದು ಪರಾವಲಂಬಿಯಲ್ಲ. ಏಷ್ಯಾದ ಬಹು ಭಾಗ, ಭಾರತ, ಚೀನಾ, ಇಂಡೋನೇಷ್ಯಾಗಳಲ್ಲಿ ಇದರ ಜಾತಿ, ಪ್ರಜಾತಿಗಳು ಹರಡಿವೆ. ತೋರಿಕೆಗೆ ಕಾಗೆಯಂತೆ ಕಂಡರೂ, ಇದರ ಉದ್ದ ಬಾಲ ಮತ್ತು ತಾಮ್ರ ಬಣ್ಣದ ರೆಕ್ಕೆಗಳಿಂದ ಇದನ್ನು ಗುರುತಿಸಬಹುದು. ಇದರ ರೆಕ್ಕೆಗಳು ನಿರ್ಬಲವಾದ್ದರಿಂದ ಇವು ಹೆಚ್ಚಾಗಿ ಹತ್ತುವ, ನಡೆಯುವ ಕ್ರಿಯೆಗಳಲ್ಲೇ ಇದರ ಆಹಾರ ಸಾಂಪಾದಿಸಿಕೊಳ್ಳುತ್ತವೆ. ಇದರ ಆವಾಸ ಕಾಡಿನಿಂದ - ನಾಡಿನವರೆಗೂ ಎಲ್ಲ ಬಗೆಯ ಪರಿಸರದಲ್ಲೂ ಇವು ಗೌಪ್ಯವಾಗಿ ಇರಬಲ್ಲವು. ಇದರ ಆಳವಾದ ಶಂಖ-ಮೊಳಗಿಸುವಂತಹ ಕೂಗನ್ನು ಹಲವೆಡೆ ಶಕುನಗಳೆಂದು ಪರಿಗಣಿಸುತ್ತಾರೆ.
ಕೆಂಬೂತ, ಕೋಗಿಲೆ ಗಣಕ್ಕೆ ಸೇರಿದ, ಕಾಗೆ ಗಾತ್ರದ 48 cm. ಉದ್ದದ ( ಕೊಕ್ಕಿನಿಂದ - ಬಾಲದ ತುದಿ) ಪಕ್ಷಿ. ಇದರ ತಲೆ,ಬೆನ್ನು, ಎದೆ, ಹೊಟ್ಟೆ ಭಾಗಗಳೆಲ್ಲಾ ನೀಲಿ ಮಿಶ್ರಿತ ಹೊಳೆವ ಕಪ್ಪು, ಕಣ್ಣುಗಳು ಕೆಂಪು . ರೆಕ್ಕೆ ಮತ್ತು ಭುಜದ ಭಾಗಗಳು ತಾಮ್ರದಂತೆ ಕೆಂಗಂದು. ಮರಿಗಳ ದೇಹ ಮಂದ ಕಪ್ಪಾಗಿದ್ದು, ನೆತ್ತಿಯ ಮೇಲೆ ಚುಕ್ಕಿಗಳು ಮತ್ತು ಬಾಲದ ಅಡಿಯಲ್ಲಿ ಬಿಳಿ ಅಥವಾ ಬೂದಿ ಬಣ್ಣದ ಅಡ್ಡ ಗೆರೆಗಳಿರಬಹುದು. ಇವುಗಳ ವ್ಯಾಪ್ತಿ ವಿಶಾಲವಾಗಿದ್ದು, ಇವುಗಳ ಲಕ್ಷಣಗಳಲ್ಲಿನ ವೈವಿದ್ಯತೆಯಿಂದಾಗಿ ಕೆಲವೆಡೆ ಇವುಗಳು ಪ್ರತ್ಯೇಕ ಪ್ರಜಾತಿಗಳಾಗಿ ಪರಿಗಣಿಸಲ್ಪಟ್ಟಿದೆ. ಪಕ್ಷಿ ತಜ್ಞರಾದ ಪೆಮೇಲ ರಸ್-ಮ್ಯುಸೇನ್ ಮತ್ತು ಯಾಂಡರ್ಟನ್ ರ ವಿಂಗಡನೆಯ ಪ್ರಕಾರ ದಕ್ಷಿಣ ಭಾರತದಲ್ಲಿನ ಕೆಂಬೂತದ ಪಂಗಡ, ಪ್ಯರೋಟಿ (parroti) ಈಗ ಪ್ರತ್ಯೇಕ ಪ್ರಜಾತಿ ಅನ್ನಿಸಿಕೊಳ್ಳಬಹುದೆಂದು ಅಭಿಪ್ರಾಯಿಸಿದ್ದಾರೆ. ಅಸ್ಸಾಂ -ಬಾಂಗ್ಲಾದೇಶದ ಕೆಂಬೂತಗಳ ಪಂಗಡ, ಇಂಟರಮೀಡಿಯಸ್ (intermedius) ದಕ್ಷಿಣ ಸಾಧಾರಣ ಪಂಗಡವೆಂದು ಪರಿಗಣಿಸಲ್ಪಟ್ಟಿರುವ ಹಿಮಾಲಯದ ಪಂಗಡದ ಕೆಂಬೂತಗಳಿಗಿಂತಲೂ ಗಾತ್ರದಲ್ಲಿ ಚಿಕ್ಕವು. ವಿವಿಧ ಪಂಗಡಗಳ ಕೆಂಬೂತಗಳ ಕರೆಗಳಲ್ಲೂ ಅಂತರವನ್ನು ಗಮನಿಸಬಹುದು. ದಕ್ಷಿಣ ಭಾರತದ ಕೆಂಬೂತದ ಗಾತ್ರ ಹಿಮಾಲಯದ ಸಾಧಾರಣ ಪಂಗಡದ ಕೆಂಬೂತಗಳಿಗಿಂತಲೂ ದೊಡ್ಡದು.[೩] ಈ ಪಂಗಡದಲ್ಲಿ ಹೆಣ್ಣು ಗಂಡಿಗಿಂತಲೂ ಸ್ವಲ್ಪ ದೊಡ್ಡದಾದರೂ ತೋರ್ಕೆಯಲ್ಲಿ ಗಂಡು ಮತ್ತು ಹೆಣ್ಣು ಹಕ್ಕಿಗಳಲ್ಲಿ ವ್ಯತ್ಯಾಸವಿಲ್ಲ.[೪]
ಸಾಧಾರಣ ಪಂಗಡದ ಕೆಂಬೂತಗಳ ವ್ಯಾಪ್ತಿ, ಹಿಂದೂ ನದಿ ಕಣಿವೆ, ದಕ್ಷಿಣ ಹಿಮಾಲಯ, ಗಂಗಾ ಪ್ರಸ್ಥಭೂಮಿ, ನೇಪಾಳ, ಭೂತಾನ್ ಪರ್ವತ ತಪ್ಪಲು ಹಾಗು ದಕ್ಷಿಣ ಚೀನಾದ ವರೆಗೆ ವಿಸ್ತರಿಸಿದೆ.[೫]
ವಿವಿಧ ಪಂಗಡಗಳ ವಿವರ
ಮೊಟ್ಟೆಯೊಡೆದ ಎಳೆ ಮರಿಗಳ ಚರ್ಮ ಕಪ್ಪಗಿದ್ದು, ಕಣ್ಣಿನ ಮೇಲೆ ಮತ್ತು ಕೊಕ್ಕಿನ ಮೇಲೆ ಬಿಳಿ ಕೂದಲುಗಳಂತಿರುವ ಪುಕ್ಕಗಳಿರುತ್ತವೆ.[೬][೭] ಕಪ್ಪು ಮೇಲ್ಕೊಕ್ಕಿನ ಅಂಚು ಮತ್ತು ಕೆಳಹೊಟ್ಟೆ ತೆಳುಗೆಂಪು, ಕಣ್ಣು - ಮಣ್ಣಿನ ಬಣ್ಣ ಮತ್ತು ಒಳ ಬಾಯಿ ಹಳದಿಯಾಗಿರುತ್ತದೆ. ಪ್ಯರೋಟಿ ಪಂಗಡದ ಮರಿಗಳು ಬೆಳೆದಂತೆ ಅದರ ಬಾಲದ ಕೆಳಭಾಗದ ಬಣ್ಣ ಹೊಳಪಿಲ್ಲದ ಘಾಡ ಕಪ್ಪು, ರೆಕ್ಕೆ ಹೊಳಪಿಲ್ಲದ ಘಾಡ ಕೆಂದು ಬಣ್ಣವಾಗಿರುತ್ತದೆ.[೫] ಪ್ಯರೋಟಿ ಪಂಗಡದ ಹೆಣ್ಣು ಹಕ್ಕಿಗಳ ರೆಕ್ಕೆಗಳು ನವೆಂಬರ್ ನಿಂದ ಜನವರಿ ಮಾಸದವರೆಗೂ ಮೊಬ್ಬು ಬಣ್ಣದ ರೆಕ್ಕೆಪದರ ಪಡೆಯುತ್ತವೆ.[೮] ಪಶ್ಚಿಮ ಘಟ್ಟದ ಕೆಂಬೂತಗಳ ಘಾತ್ರ ಸ್ವಲ್ಪ ಚಿಕ್ಕದು.
ಘನ-ಕೆಂಬೂತಗಳ ಆಹಾರ ಬಲುಬಗೆಯ ಕೀಟಗಳು, ಹುಳುಗಳು, ಧಾನ್ಯಗಳು, ಹಣ್ಣುಗಳು, ಬೀಜಗಳು, ಅನ್ಯ ಹಕ್ಕಿಯ ಮೊಟ್ಟೆಗಳು, ಚಿಕ್ಕ ಹಾವುಗಳು (ಮಂಡಲ, Saw-scaled viper),[೯] ಕೆಲ ವಿಶಕಾರಿ ಹಣ್ಣುಗಳು ಮತ್ತು ಅದರ ಬೀಜಗಳು.[೫][೧೦] ಪಾಮ್(ಎಣ್ಣೆ ಬೀಜ) ಮರದಲ್ಲಿನ ಹಣ್ಣನ್ನು ಬಯಸುವ ಇವು, ಪಾಮ್-ಮರದ ವ್ಯವಸಾಯಿಕರಲ್ಲಿ ಬೆಳೆ ನಾಶಕ ಎಂದೆನಿಸಿವೆ.[೧೧] ಬೆಳಗಿನ ಬಿಸಿಲಲ್ಲಿ ಒಂಟಿ ಇಲ್ಲವೇ ಜೋಡಿಯಾಗಿ, ರೆಕ್ಕೆಹರಡಿ ಮೈಕಾಯಿಸಿಕೊಂಡು ಸೂರ್ಯನ ತಾಪ ಕಡಿಮೆ ಇರುವ ಸಮಯದಲ್ಲಿ ತಮ್ಮ ಚಟುವಟಿಕೆಗಳಲ್ಲಿ ತೊಡಗುತ್ತವೆ. ಸಂಸಾರ ಹೂಡಿರುವ ಕೆಂಬೂತಗಳ ವ್ಯಾಪ್ತಿ 0.9 - 7.2 ಹೆಕ್ಟೇರ್-ಗಳು. ಕೆಲವೊಮ್ಮೆ ಯುಗಳ ಕೂಗಿನಲ್ಲಿ ತೊಡಗಿದಾಗ, ಹೆಣ್ಣು ಹಕ್ಕಿಯದು ತಗ್ಗು-ಗಢಸಿನ ಕೂಗು ಆಗಿರುತ್ತದೆ.[೩] ಶಂಖನಾದದಿಂದ ಹಿಡಿದು, ವಟಗುಟ್ಟುವ ಕರೆ, ಕಿರಚುವ , ಭುಸುಗುಟ್ಟುವ ಕೋಪದ ಕೂಗು ಹೀಗೆ ಇವುಗಳು ಬಗೆಬಗೆಯ ಕರೆಗಳನ್ನು ಹೊಂದಿವೆ.[೪]
ಕೋಗಿಲೆಯ ಗಣಕ್ಕೆ ಸೇರಿದ ಕೆಂಬೂತಗಳು ತಮ್ಮ ಸಂತತಿಯ ಪಾಲನೆಗೆ ಕೋಗಿಲೆಗಳಂತೆ ಪರಾವಲಂಬಿಗಳಲ್ಲದಿದ್ದರೂ, ಕೆಂಬೂತಗಳು ಸಂತಾನ ಅಭಿವೃದ್ಧಿಯಲ್ಲಿ ಅದರದೇ ಆದ ವೈಚಿತ್ರ್ಯಗಳನ್ನು ಗಮನಿಸಲಾಗಿದೆ. ಹೆಣ್ಣು ಕೆಂಬೂತಗಳು ಕೆಲವೆಡೆ ಏಕ-ಸಂಗಾತಿಗಳಾಗಿದ್ದರೆ[೧೨], ಇನ್ನು ಕೆಲವೆಡೆ ಹಲವು ಗಂಡು ಹಕ್ಕಿಗಳು ಒಂದೇ ಹೆಣ್ಣು ಕೆಂಬೂತದೊಡನೆ ಜೀವಾವಧಿ ಸಂಬಂಧ ಹೊಂದಿರಬಹುದು. ಕೋಗಿಲೆಯ ಜಾತಿಗೆ ಸೇರಿದ ಕೆಂಬೂತಗಳು ತಮ್ಮ ಸಂತತಿಯ ಪಾಲನೆಗೆ ಕೋಗಿಲೆಗಳಂತೆ ಪರಾವಲಂಬಿಗಳಲ್ಲದಿದ್ದರೂ, ವಿವಿದ ಪಂಗಡಗಳಲ್ಲಿನ ಹೆಣ್ಣು ಕೆಂಬೂತಗಳು ವಿವಿಧ ಮಟ್ಟಕ್ಕೆ ಸಂತಾನ ಪಾಲನೆಯಲ್ಲಿ ಅನಾಸಕ್ತಿ ತೋರುತ್ತವೆ. ಗಂಡು ಕೆಂಬೂತಗಳು ಸಂತಾನ ಪಾಲನೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ.[೧೩] ದಕ್ಷಿಣ ಭಾರತದ ಕೆಂಬೂತಗಳು ಸಾಧಾರಣವಾಗಿ ಮುಂಗಾರು ಮಳೆಗಾಲದ ನಂತರ, ಜೂನ್ - ಸೆಪ್ಟೆಂಬರ್ ಮಾಸಗಳಲ್ಲಿ, ಸಂತಾನ ಅಭಿವೃದ್ಧಿ ಕ್ರಿಯೆಯಲ್ಲಿ ತೊಡಗುತ್ತವೆ.[೧೨] ಸಂಗಾತಿಗಳು ಒಂದನ್ನೊಂದು ಅರಸಿ ಓಡುವುದು, ಗಂಡು ಹಕ್ಕಿ ಆಹಾರವನ್ನು ಉಡುಗೊರೆಯಾಗಿ ಕೊಡುವುದು - ಹೀಗೆ ರಾಸ-ಕ್ರೀಡೆಯನ್ನಾಡುವುದರಿಂದ ಪ್ರಾರಂಭವಾಗುತ್ತದೆ. ಹೆಣ್ಣು ಹಕ್ಕಿ ತನ್ನ ಬಾಲವನ್ನು ತಗ್ಗಿಸಿ, ರೆಕ್ಕೆಗಳನ್ನು ಕೆಳೆಗಿಳುಸುವುದರ ಮೂಲಕ ತನ್ನ ಒಪ್ಪಿಗೆಯನ್ನು ಸೂಚಿಸುತ್ತದೆ.[೧೪] 3-8 ದಿನಗಳಲ್ಲಿ ಗಂಡು ಹಕ್ಕಿ ಆಳದ ಬಟ್ಟಲಿನಂತಹ ಗೂಡನ್ನು ದಟ್ಟವಾಗಿ ಹಬ್ಬಿರುವ ಬಳ್ಳಿಗಳಲ್ಲಿ , ಬಿದಿರು ಪೊದೆಗಳಲ್ಲಿ ಅಥವ ಈಚಲು ಮರದ ಮೇಲೆ ಕತ್ತುತ್ತವೆ. ಹೆಣ್ಣು ಹಕ್ಕಿ 3-5 ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳ (ತೂಕ 14.8 g, 36–28 mm) ಸುಣ್ಣದಂತಹ ತೊಗಟೆಯ ಮೇಲೆ ಹಳದಿಯ ಹೊಳಪು ಇರುತ್ತದೆ. ಈ ಹೊಳಪು ದಿನಗಳೆದಂತೆ ಸವೆಯುತ್ತದೆ.[೧೫] ಹೆಣ್ಣು ಮತ್ತು ಗಂಡು ಹಕ್ಕಿಗಳೆರಡೂ ಗೂಡು, ಮೊಟ್ಟೆ, ಮರಿಗಳ ಪಾಲನೆಯಲ್ಲಿ ತೊಡಗುತ್ತವೆಯಾದರೂ ಗಂಡು ಹಕ್ಕಿಯೇ ಪ್ರಧಾನ ಪೋಷಣಾ ಜವಾಬ್ಧಾರಿಯನ್ನು ವಹಿಸುತ್ತದೆ. 15-16 ದಿನಗಳಲ್ಲಿ ಕಾವಿಟ್ಟ ಮೊಟ್ಟೆಗಳು ಮರಿಯಾಗಿ, ನಂತರ 18-22 ದಿನಗಳಲ್ಲಿ ಮರಿಗಳು ಹಾರಲು ಸಿದ್ಧವಾಗುತ್ತವೆ. ದಕ್ಷಿಣ ಭಾರತದಲ್ಲಿ ನಡೆಸಿದ ಒಂದು ಸಂಶೋಧನೆಯ ಪ್ರಕಾರ, ಘನ-ಕೆಂಬೂತಗಳ 77% ಮೊಟ್ಟೆಗಳು ಮರಿಗಳಾಗುತ್ತವೆ, 67% ಮರಿಗಳು ಹಾರುವ ಅವಸ್ತೆಯನ್ನು ತಲುಪುತ್ತವೆ. ಕೆಲವೊಮ್ಮೆ ಮೊಟ್ಟೆಗಳಿರುವ ತಮ್ಮ ಗೂಡನ್ನು ಕೆಂಬೂತಗಳು ತೊರೆದಿರುವ ಮತ್ತು ಕಾಡುಕಾಗೆಗಳು ಗೂಡನ್ನು ಹಾಳುಮಾಡಿರುವ ಸಂಭವಗಳಿವೆ.[೧೨] ಮಲೇರಿಯಾ ರೋಗಕ್ಕೆ ಕಾರಣವಾಗುವ ಹೆಮೊಸ್ಪೊರೈಡಿಯಾ (Haemosporidia) ಕ್ಕೆ ಸಂಬಂಧಿಸಿದ ಪರಾವಲಂಬಿಗಳು ಇವುಗಳ ರಕ್ತದಲ್ಲಿ ಕಾಣಿಸಿಕೊಳ್ಳಬಹುದು. ಈ ಪರಾವಲಂಬಿಗಳು ಸೊಳ್ಳೆಗಳು ಮತ್ತು ಹೇನುಗಳಿಂದ ಹರಡಲ್ಪಟ್ಟು ಕೋಗಿಲೆ ಗಣದ ಹಕ್ಕಿಗಳಲ್ಲಿ ಮಲೇರಿಯ ರೋಗವನ್ನು ಉಂಟುಮಾದಬಹುದು.[೧೬] ಕೆಂಬೂತಗಳಲ್ಲಿ, ಹೆಮಿಫಿಸಲಿಸ್ (Haemaphysalis) ಹೇನುಗಳು ಇರುವುದು ಗಮನಿಸಲಾಗಿದೆ.[೧೭]
ಕನ್ನಡದಲ್ಲಿ ಕುಪ್ಪುಳಕ್ಕಿ, ಕೆಂಬತ್ತು, ಭಾರದ್ವಾಜ ಹಕ್ಕಿ ಎಂದೂ ಕರೆಯಲ್ಪಡುವ ಕೆಂಬೂತ ತನ್ನ ಕೂಗು, ವರ್ತನೆಗಳಿಂದ ಅನೇಕ ಸಂಸ್ಕೃತಿಗಳಲ್ಲಿ ಶಕುನ ಸೂಚಕ ಎಂದು ಪರಿಗಣಿಸಲಾಗಿದೆ.[೧೮][೧೯] ಇದರ ಕೂಗು ಶಂಖನಾದವನ್ನು ಹೋಲುವುದರಿಂದ ಇದರ ಕೂಗು ಶುಭ ಶಕುನ ಎಂಬ ನಂಬಿಕೆ ಇತ್ತು (ಇದೆ). ಬ್ರಿಟೀಷರು ಇವುಗಳನ್ನು ಕಾಡು ಕೋಳಿಗಳೆಂದು ಭಾವಿಸಿ ಬೇಟೆಯಾಡಿ ಅದರ ಮಾಂಸದ ಕೆಟ್ಟ ರುಚಿಗೆ ತಿನ್ನಲಾಗದೆ ಅದನ್ನು ತಮ್ಮೊಂದಿಗಿದ್ದ ಬೇಟೆ ನಾಯಿಗಳಿಗೆ (ಗ್ರಿಫ್ಫ್) ಉಣಿಸಿ, ಕೆಂಬೂತಗಳನ್ನು, ಗ್ರಿಫ್ಫ್ ಕೋಳಿ (Griff's pheasant) ಎಂದು ಕರೆದರು.[೨೦] ನಾಟಿ-ವೈದ್ಯದಲ್ಲಿ ಇದರ ಮಾಂಸ ಕ್ಷಯರೋಗ (tuberculosis) ಹಾಗು ಉಸಿರಾಟಕ್ಕೆ ಸಂಬಂಧಿಸಿದ ರೋಗಗಳಿಗೆ ಮದ್ದೆಂದು ಪರಿಗಣಿಸಲ್ಪಟ್ಟಿತ್ತು.[೨೧] ಭಾರದ್ವಾಜ-ಹಕ್ಕಿ ಎಂದು ಕರೆಸಿಕೊಳ್ಳುವ ಕೆಂಬೂತಗಳು, ಸಂಜೀವಿನಿ ಕಡ್ಡಿಯನ್ನು (ಗಿಡ ಮೂಲಿಕೆ) ಬಲ್ಲದು ಎಂಬ ಮೂಢನಂಬಿಕೆಯಿಂದ ಈ ಹಿಂದೆ, ಜನರು, ಸತ್ತವರನ್ನು ಸಂಜೀವಿನಿ ಮೂಲಿಕೆಯಿಂದ ಬದುಕಿಸಿಕೊಳ್ಳಬಹುದೆಂಬ ( ರಾಮಾಯಣದಲ್ಲಿ, ಯುದ್ಧದಲ್ಲಿ ಸತ್ತ ಲಕ್ಷ್ಮಣನನ್ನು ಹನುಮ ತಂದ ಸಂಜೀವಿನಿಯಿಂದ ಬದುಕಿಸಿಕೊಳ್ಳಲಾಯಿತು) ಮೂಢನಂಬಿಕೆಯಿಂದ ಕೆಂಬೂತಗಳ ಗೂಡುಗಳಿಗೆ ಬೆಂಕಿ ಇಡುತ್ತಿದ್ದರು. ತಮ್ಮ ಮರಿಗಳನ್ನು ಬದುಕಿಸಿಕೊಳ್ಳಲು ಕಂಬೂತಗಳು ಸಂಜೀವಿನಿ ಮೂಲಿಕೆ ತರುವುದೆಂದು - ತಂದಾಗ ತಾವು ಆ ಮೂಲಿಕೆಯನ್ನು ಅದರಿಂದ ಕಸಿದು ತಮ್ಮವರನ್ನು ಬದುಕಿಸಿಕೊಳ್ಳಬಹುದೆಂಬ ಅಜ್ಞಾನ ಕೆಂಬೂತಗಳ ಸಂತತಿಗೆ ದುರ್ಗತಿ ತಂದೊಡ್ಡಿತ್ತು.
|journal=
(help) ಕೆಂಬೂತ, (ಕೆಂಬೂತ-ಘನ - Greater Coucal or Crow Pheasant) (ವೈಜ್ಞಾನಿಕ ಹೆಸರು : Centropus sinensis) ಕೆಂಬೂತ, ಕಾಗೆ ಗಾತ್ರದ ಕೋಗಿಲೆ ಗಣಕ್ಕೆ ಸೇರಿದ ಒಂದು ಹಕ್ಕಿ ಪ್ರಭೇದ. ಕೋಗಿಲೆ (cuckoo) ಗಣಕ್ಕೆ ಸೇರಿದ್ದರೂ, ಕೋಗಿಲೆಯಂತೆ ಬೇರೆ ಹಕ್ಕಿಗಳ ಗೂಡಿನಲ್ಲಿ ಮೊಟ್ಟೆ ಇಡುವುದಿಲ್ಲ, ಹಾಗಾಗಿ ಇದು ಪರಾವಲಂಬಿಯಲ್ಲ. ಏಷ್ಯಾದ ಬಹು ಭಾಗ, ಭಾರತ, ಚೀನಾ, ಇಂಡೋನೇಷ್ಯಾಗಳಲ್ಲಿ ಇದರ ಜಾತಿ, ಪ್ರಜಾತಿಗಳು ಹರಡಿವೆ. ತೋರಿಕೆಗೆ ಕಾಗೆಯಂತೆ ಕಂಡರೂ, ಇದರ ಉದ್ದ ಬಾಲ ಮತ್ತು ತಾಮ್ರ ಬಣ್ಣದ ರೆಕ್ಕೆಗಳಿಂದ ಇದನ್ನು ಗುರುತಿಸಬಹುದು. ಇದರ ರೆಕ್ಕೆಗಳು ನಿರ್ಬಲವಾದ್ದರಿಂದ ಇವು ಹೆಚ್ಚಾಗಿ ಹತ್ತುವ, ನಡೆಯುವ ಕ್ರಿಯೆಗಳಲ್ಲೇ ಇದರ ಆಹಾರ ಸಾಂಪಾದಿಸಿಕೊಳ್ಳುತ್ತವೆ. ಇದರ ಆವಾಸ ಕಾಡಿನಿಂದ - ನಾಡಿನವರೆಗೂ ಎಲ್ಲ ಬಗೆಯ ಪರಿಸರದಲ್ಲೂ ಇವು ಗೌಪ್ಯವಾಗಿ ಇರಬಲ್ಲವು. ಇದರ ಆಳವಾದ ಶಂಖ-ಮೊಳಗಿಸುವಂತಹ ಕೂಗನ್ನು ಹಲವೆಡೆ ಶಕುನಗಳೆಂದು ಪರಿಗಣಿಸುತ್ತಾರೆ.