ಕಾಡು ಕುರಿ (Indian Muntjac/Barking Deer) ಭಾರತದ ಸುಮಾರು ಕಾಡುಗಳಲ್ಲಿ ಕಂಡುಬರುವ ಒಂದು ಸಸ್ತನಿ ಪ್ರಾಣಿ. ಸಸ್ಯಾಹಾರಿ ಪ್ರಭೇದಕ್ಕೆ ಸೇರಿದ ಈ ಪ್ರಾಣಿಯ ಮುಖ್ಯ ಆಹಾರವೆಂದರೆ- ಹುಲ್ಲು, ಎಲೆ, ಸೊಪ್ಪು ಮತ್ತು ಮರದಿಂದ ಉದುರಿದ ಹಣ್ಣು ಹಾಗೂ ಬೀಜಗಳು. ಕಾಡು ಕುರಿಯು ಸುಮಾರು ೧.೩ ಅಡಿಗಳಷ್ಟು ಎತ್ತರ ಮತ್ತು ೩ ಅಡಿಗಳಷ್ಟು ಉದ್ದವಿರುತ್ತದೆ. ಮತ್ತು ಇದರ ತೂಕ ಸುಮಾರು ೧೨ ರಿಂದ ೧೬ ಕೆಜಿ.
ಕಾಡು ಕುರಿಗಳನ್ನು ಅದರ ಪುಟ್ಟ ಗಾತ್ರ, ತಲೆಯ ಮೇಲಿನ ಕೊಂಬು ಮತ್ತು ಆನೆ ದಂತದಂತಿರುವ ಪುಟ್ಟ ಕೋರೆ ಹಲ್ಲುಗಳಿಂದ ಗುರುತಿಸಬಹುದು. ಇವುಗಳು ಸಾಧಾರಣವಾಗಿ ಸಂಜೆ ಮತ್ತು ರಾತ್ರಿಗಳಲ್ಲಿ ಹೆಚ್ಚಾಗಿ ಸಂಚಾರ ಮಾಡುವುದರಿಂದ ಹಗಲಿನಲ್ಲಿ ಇವನ್ನು ಕಾಣುವುದು ಕೊಂಚ ಕಠಿಣ. ಸ್ವಭಾವತ ಸಂಕೋಚದ ಪ್ರಾಣಿಯಾದ ಕಾರಣ ಮಾನವರನ್ನು ಕಂಡ ತಕ್ಷಣ ಇವು ಓಡಿ ಮರೆಯಾಗುವವು. ಗಂಡು ಕುರಿಯು ತಲೆಯ ಮೇಲೆ ಕೊಂಬು ಮತ್ತು ಪುಟ್ಟ ಕೋರೆ ಹಲ್ಲನ್ನು ಹೊಂದಿರುತ್ತದೆ. ಹೆಣ್ಣಿಗೆ ಇವೆರಡು ಇರುವಿದಿಲ್ಲ.
ಕಾಡು ಕುರಿಗಳು ಭಾರತ ಮಾತ್ರವಲ್ಲದೆ- ನೇಪಾಳ, ಮಲೇಷ್ಯ, ದಕ್ಷಿಣ ಚೀನ ಮತ್ತು ತೈವಾನ್ ದೇಶಗಳಲ್ಲು ಸಹ ಕಂಡು ಬರುತ್ತವೆ.
ಕಾಡು ಕುರಿಯ ಒಂದು ಪ್ರಮುಖವಾದ ಗುಣವೆಂದರೆ ಮಾಂಸಾಹಾರಿ ಪ್ರಾಣಿಗಳಾದ ಹುಲಿ, ಸಿಂಹ, ಚಿರತೆ ಇವುಗಳ ಬಗ್ಗೆ ಅತ್ಯಂತ ನಿಖರವಾದ ಮಾಹಿತಿಯನ್ನು ಕಾಡಿನ ಇತರೆ ಪ್ರಾಣಿಗಳಿಗೆ ತಿಳಿಸುವುದು. ಈ ಮಾಂಸಾಹಾರಿ ಪ್ರಾಣಿಗಳನ್ನು ಕಂಡ ಕೂಡಲೆ ಕಾಡು ಕುರಿಯು ಜೋರಾಗಿ ಬೊಗಳಿಕೆಯಂತಹ ಧ್ವನಿಯಲ್ಲಿ ಕೂಗುತ್ತವೆ, ಹಾಗು ಇತರೆ ಪ್ರಾಣಿಗಳಿಗೆ ಎಚ್ಚರಿಕೆಯನ್ನು ನೀಡುತ್ತದೆ. ಕಾಡು ಕುರಿಯ ಬೊಗಳಿಕೆಯು ಕಾಡಿನಲ್ಲಿ ಮಾಂಸಾಹಾರಿ ಪ್ರಾಣಿಗಳ ಬಗ್ಗೆ ಅತ್ಯಂತ ನಿಖರವಾದ ಮಾಹಿತಿ.