ಐಡರ್ ಬಾತು ಸೊಮಟೇರಿಯ ಜಾತಿಗೆ ಸೇರಿದ ಕಡಲಬಾತು.
ಇವುಗಳಲ್ಲಿ ಹಲವು ಬಗೆಯ ಪ್ರಭೇದಗಳಿದ್ದರೂ ಅಮೆರಿಕದ ಐಡರ್ (ಸೊ.ಡ್ರೆಸ್ಸೇರಿ) ಮತ್ತು ಯುರೋಪಿನ ಐಡರ್ (ಸೊ.ಮೊಲ್ಲಿಸ್ಸಿಮ) ಎಂಬುವು ಪ್ರಸಿದ್ಧವಾದುವು. ಇವು ಲ್ಯಾಬ್ರಡಾರ್, ನ್ಯೂಫೌಂಡ್ಲೆಂಡ್, ಗ್ರೀನ್‍ಲ್ಯಾಂಡ್, ಐಸ್‍ಲ್ಯಾಂಡ್ ಮತ್ತು ನಾರ್ವೆಗಳ ಕಡಲ ತೀರ ಪ್ರದೇಶಗಳಲ್ಲಿ ವಾಸಿಸುತ್ತವೆ.
ಇವುಗಳ ತಲೆ ವಿಚಿತ್ರ ಹಾಗೂ ವೈಶಿಷ್ಟ್ಯಪುರ್ಣವಾದದ್ದು, ತಲೆ ದಪ್ಪ: ಕೊಕ್ಕು ಮೂರು ಅಂಗುಲಗಳಷ್ಟು ಉದ್ದವಿದ್ದು ಮುಂದಲೆಯಿಂದ ಹೊರಟ ಪುಕ್ಕ ಮೂಗಿನ ಹೊಳ್ಳೆಯವರೆಗೂ ಚಾಚಿರುವುದರಿಂದ ಹಳದಿಬಣ್ಣದ ಕೊಕ್ಕು ಪುಕ್ಕಮಯವಾಗಿರುವಂತೆ ಕಾಣುತ್ತದೆ. ಗಂಡುಬಾತಿನ ತಳಭಾಗದಲ್ಲಿ ಕಪ್ಪು ಪುಕ್ಕಗಳಿವೆ. ತಲೆ ಮತ್ತು ಬೆನ್ನಿನ ಭಾಗವೆಲ್ಲ ಬಿಳುಪು ಪುಕ್ಕಗಳಿಂದ ಆವೃತವಾಗಿದೆ. ಹೆಣ್ಣಿನ ರೆಕ್ಕೆಯನ್ನು ಅಗಲಿಸಿದರೆ ಕೆಂಪು ಚುಕ್ಕೆಗಳಿಂದ ಕೂಡಿದ ಎರಡು ಕಪ್ಪು ಪಟ್ಟೆಗಳನ್ನು ಕಾಣಬಹುದು. ಈ ಹಕ್ಕಿಗಳು ಏಡಿ, ಕಡಲ ಡುಬ್ಬೆ ಮತ್ತು ಕಪ್ಪೆ ಚಿಪ್ಪು ಹುಳುಗಳನ್ನು ನುಂಗಿ ಜೀರ್ಣಿಸಿಕೊಳ್ಳುತ್ತವೆ. ಚೆನ್ನಾಗಿ ಈಜುತ್ತವೆ. 7-9 ಮೀಗಳ ಆಳದವರೆಗೂ ನೀರಿನಲ್ಲಿ ಮುಳುಗಬಲ್ಲುವು.
ಸಂತಾನೋತ್ಪತ್ತಿ ಕಾಲದಲ್ಲಿ ಹೆಣ್ಣು ಬಾತು ಸಮುದ್ರದ ದಡದ ಮೇಲೆ ಬೆಳೆದಿರುವ ಜೊಂಡುಹುಲ್ಲಿನ ಸಹಾಯದಿಂದ ಗೂಡನ್ನು ಮಾಡಿಕೊಂಡು ಅದರಲ್ಲಿ ತನ್ನ ಎದೆಯ ಪುಕ್ಕವನ್ನು ಚೆಲ್ಲಿ ಮೃದುವಾದ ಹಾಸಿಗೆಯನ್ನು ಮಾಡಿಕೊಂಡು ಮೊಟ್ಟೆಗಳನ್ನಿಡುತ್ತದೆ. ಒಂದೊಂದು ಗೂಡಿನಲ್ಲಿ ಸರಾಸರಿ ಐದು ಮೊಟ್ಟೆಗಳಿರುತ್ತವೆ. ಗೂಡು ಬಿಟ್ಟು ಹೊರಗೆ ಬರುವಾಗಲೆಲ್ಲ ಹೆಣ್ಣು ಬಾತು ತನ್ನ ಎದೆಯಭಾಗದ ಪುಕ್ಕವನ್ನು ಮೊಟ್ಟೆಗಳ ಮೇಲೆ ಉದುರಿಸಿ ಹೊದಿಕೆ ಮಾಡುತ್ತದೆ. ಅಲ್ಲಿನ ನಿವಾಸಿಗಳು ತಮ್ಮ ಆಹಾರಕ್ಕಾಗಿ ಮೊಟ್ಟೆಗಳನ್ನೂ ಹಾಸಿಗೆ ಮತ್ತು ಹೊದಿಕೆಗಳ ತಯಾರಿಕೆ ಪುಕ್ಕಗಳನ್ನೂ ಸಂಗ್ರಹಿಸುತ್ತಾರೆ. ಗೂಡು ಖಾಲಿಯಾದಂತೆಲ್ಲ ಹೆಣ್ಣು ಬಾತು ಮತ್ತೆ ಪುಕ್ಕಗಳನ್ನು ಬಿಚ್ಚಿ ಹಾಸಿಗೆ ಮಾಡಿಕೊಂಡು ಮೊಟ್ಟೆಗಳನ್ನು ಇಡುತ್ತದೆ. ಹೆಣ್ಣು ಐಡರ್ ಬಾತಿನ ಪುಕ್ಕ ಗಂಡಿನದಕ್ಕಿಂತ ಮೃದು, ಹಗುರ ಮತ್ತು ಸ್ಥಿತಿಸ್ಥಾಪಕ ಶಕ್ತಿಯುಳ್ಳದ್ದು. ಹೆಚ್ಚು ಶಾಖ ಕೊಡುವ ಈ ಪುಕ್ಕಗಳಿಂದ ಬೆಲೆಬಾಳುವ ಹಾಸಿಗೆ ಮತ್ತು ಹೊದಿಕೆಗಳು ತಯಾರಾಗುತ್ತವೆ. ಗಂಡಿನ ಪುಕ್ಕಗಳಿಂದ ಮಾಡಿದ ಹಾಸಿಗೆಗಳಿಗೆ ಬೆಲೆ ಕಡಿಮೆ. ಹೆಚ್ಚು ಮೊಟ್ಟೆಗಳನ್ನಿಡುತ್ತದಾದರೂ ಜನಶೋಷಣೆಯಿಂದಾಗಿ ಈ ಜಾತಿಯ ಸಂತಾನ ಕ್ರಮೇಣ ಕ್ಷೀಣಿಸುತ್ತಿದೆ. ಈಚೆಗೆ ಕಾನೂನಿನ ರಕ್ಷಣೆ ನೀಡಿ ಈ ಜಾತಿಯನ್ನು ಸಂರಕ್ಷಿಸಲು ಏರ್ಪಾಟು ಮಾಡಿದ್ದಾರೆ.
King eiders (male and female) in natural habitat in Alaska wildlife refuge
The gait of a king eider at Weltvogelpark Walsrode (Walsrode Bird Park)
ಐಡರ್ ಬಾತು ಸೊಮಟೇರಿಯ ಜಾತಿಗೆ ಸೇರಿದ ಕಡಲಬಾತು.