dcsimg

ಗೆಜೆಲ್ ( Kannada )

provided by wikipedia emerging languages

ಗೆಜೆಲ್ಉತ್ತರ ಹಾಗೂ ಪೂರ್ವ ಆಫ್ರಿಕ, ಅರೇಬಿಯ, ಇಸ್ರೇಲ್, ಸಿರಿಯ, ಮಧ್ಯ ಏಷ್ಯ, ಭಾರತದ ಮೈದಾನ ಪ್ರದೇಶಗಳಲ್ಲೆಲ್ಲ ಕಾಣಬರುವ ಒಂದು ಚೆಲುವಾದ ಜಿಂಕೆ. ಆರ್ಟಿಯೊಡಕ್ಟಿಲ ಗಣದ ಬೋವಿಡೀ ಕುಟುಂಬಕ್ಕೆ ಸೇರಿದೆ. ಗೆಜಲ್ ಎಂಬುದು ಇದರ ವೈಜ್ಞಾನಿಕ ಹೆಸರು. ಇದರಲ್ಲಿ ಸುಮಾರು 12 ಪ್ರಭೇದಗಳಿವೆ. ಗೆಜಲ್‍ನ ವಾಸ ಸಾಧಾರಣವಾಗಿ ಮರಗಳಿಲ್ಲದ ಬಯಲು ಪ್ರದೇಶಗಳಲ್ಲಿ. ಬಿರುಬಿಸಿಲಿನಲ್ಲಿ ಬೇಯುವ ಮರುಭೂಮಿಗಳು ಇದರ ಅಚ್ಚುಮೆಚ್ಚಿನ ನೆಲೆಗಳು.

ಲಕ್ಷಣಗಳು

ಗೆಜೆಲುಗಳು ಮಧ್ಯಮಗಾತ್ರದ ಚಿಗರಿಗಳು. ವಿವಿಧ ಪ್ರಭೇದಗಳ ಉದ್ದ 1-1.2 ಮೀ. ಭುಜದ ಬಳಿಯ ಎತ್ತರ 51-89 ಸೆಂಮೀ. ತೂಕ 14-75 ಕಿಗ್ರಾಂವರೆಗೆ ವ್ಯತ್ಯಾಸವಾಗುತ್ತದೆ. ಇವಕ್ಕೆ 12-14 ಸೆಂಮೀ ಉದ್ದದ ಬಾಲವಿದೆ. ದೇಹದ ಬಣ್ಣ ಗಾಢ ಕಂದಿನಿಂದ ಬೂದಿ, ಬಿಳಿಯವರೆಗೆ ವೈವಿಧ್ಯಪೂರ್ಣವಾಗಿದೆ. ಹೊಟ್ಟೆಯ ಭಾಗ ತಿಳಿಬಣ್ಣದ್ದು. ಕೆಲವು ಪ್ರಭೇದಗಳಲ್ಲಿ ಬೆನ್ನು ಮತ್ತು ಹೊಟ್ಟೆಯ ಭಾಗಗಳ ಬಣ್ಣಗಳು ಮಿಳಿತವಾಗುವಲ್ಲಿ ಗಾಢವರ್ಣದ ಒಂದು ಪಟ್ಟೆಯಿರುವುದುಂಟು. ಬಾಲದ ಬುಡ ಮತ್ತು ತೊಡೆಗಳ ಹಿಂಭಾಗಗಳು ಬೆಳ್ಳಗಿರುತ್ತವೆ. ಬಹುಪಾಲು ಪ್ರಭೇದಗಳಲ್ಲಿ ಗಂಡು ಮತ್ತು ಹೆಣ್ಣುಗಳೆರಡರಲ್ಲೂ ಒಂದೊಂದು ಜೊತೆ ಕೊಂಬುಗಳಿರುತ್ತವೆ. ಸಬ್ಗಟುರೋಸ ಎಂಬ ಪ್ರಭೇದದಲ್ಲಿ ಕೊಂಬುಗಳು ಗಂಡಿನಲ್ಲಿ ಮಾತ್ರ ಇರುತ್ತವೆ. ಕೊಂಬುಗಳ ಆಕಾರ ಲೈರ್ ವಾದ್ಯದಂತೆ: ಸರಾಸರಿ ಉದ್ದ 25-35 ಸೆಂಮೀ. ಕೆಲವು ಸಲ ಕೊಂಬುಗಳು ತಲೆಯ ಆಚೀಚೆ ಹರಡಿರುವುದು ಇಲ್ಲವೆ ಹಿಂದಕ್ಕೆ ಬಾಗಿರುವುದು ಉಂಟು. ಕೊಂಬುಗಳು ಹೇಗೇ ಇರಲಿ, ಇವುಗಳ ತುದಿ ಮಾತ್ರ ಮೇಲಕ್ಕೆ ಬಾಗಿರುತ್ತದೆ.

ವಾಸ

ಗೆಜೆಲುಗಳು ಸಾಮಾನ್ಯವಾಗಿ ಗುಂಪುಗಳಲ್ಲಿ ವಾಸಿಸುತ್ತವೆ. ಒಂದೊಂದು ಗುಂಪಿನಲ್ಲಿ 5-10 ಪ್ರಾಣಿಗಳಿರುತ್ತವೆ. ಕೆಲವು ಸಲ ನೂರಾರು ಪ್ರಾಣಿಗಳಿರುವುದೂ ಉಂಟು. ಗಿಡಮರಗಳ ಎಳೆಚಿಗುರು, ಹುಲ್ಲಿನ ಎಸಳುಗಳು ಇವುಗಳ ಮುಖ್ಯ ಆಹಾರ. ಗೆಜೆಲುಗಳು ತಮ್ಮ ಓಟದ ಸಾಮರ್ಥ್ಯಕ್ಕೆ ಹೆಸರಾಗಿವೆ. ಬಹುಶ: ಬೇಟೆಯ ಚಿರತೆ, ಗ್ರೇ ಹೌಂಡ್ ನಾಯಿ ಮತ್ತು ವಿಶೇಷ ಶಿಕ್ಷಣ ಕೊಟ್ಟು ಬೆಳೆಸಿದ ಗಿಡುಗಗಳನ್ನು ಬಿಟ್ಟರೆ ಗೆಜೆಲುಗಳೇ ಅತ್ಯಂತ ವೇಗವಾಗಿ ಓಡಬಲ್ಲ ಪ್ರಾಣಿಗಳು. ಪೂರ್ವ ಆಫ್ರಿಕದ ಥಾಮ್ಸನ್ಸ್‌ ಗೆಜೆಲ್ ಎಂಬುದು ಗಂಟೆಗೆ 65 ಕಿಮೀ ವೇಗದಲ್ಲಿ ಓಡಬಲ್ಲದು. ಇವುಗಳ ಸಂತಾನೋತ್ಪತ್ತಿಯ ಕಾಲ ಏಪ್ರಿಲ್-ಜೂನ್ಗಳ ಅವಧಿ. ಹುಟ್ಟಿದ ಒಂದು ವಾರದಲ್ಲೆ ಮರಿಗಳಿಗೆ ಸಾಕಷ್ಟು ಬಲ ಬಂದು ಅವು ಸ್ವತಂತ್ರ ಜೀವನ ನಡೆಸತೊಡಗುತ್ತವೆ. ಗೆಜೆಲುಗಳ ಆಯಸ್ಸು ಸುಮಾರು 10-12 ವರ್ಷಗಳು.

ಅರೇಬಿಯ ಮತ್ತು ಏಷ್ಯದ ಕೆಲವು ಭಾಗಗಳಲ್ಲಿ ಗೆಜೆಲುಗಳನ್ನು ಮಾಂಸಕ್ಕಾಗಿ ಬೇಟೆಯಾಡುತ್ತಾರೆ. ಬೇಟೆಯಲ್ಲಿ ನಾಯಿ ಮತ್ತು ಗಿಡುಗಗಳನ್ನು ಬಳಸಲಾಗುತ್ತದೆ. ಕೆಲವು ಪ್ರಭೇದಗಳ ಮಾಂಸ ಮಾತ್ರ ಬಲುರುಚಿ.

ಛಾಯಾಂಕಣ

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಗೆಜೆಲ್: Brief Summary ( Kannada )