ಆಫ್ರಿಕದಲ್ಲಿ ಜೀವಿಸುವ ಒಂದು ವಾನರ. ಪ್ರೈಮೇಟ್ ಗಣದ ಹೊಮಿನಿಡೇ ಕುಟುಂಬಕ್ಕೆ ಸೇರಿದೆ. ಒರಾಂಗೂಟಾನ್, ಗಿಬ್ಬನ್, ಗೊರಿಲ್ಲಗಳ ಹತ್ತಿರ ಸಂಬಂಧಿ. ಅವುಗಳಂತೆಯೇ ಇದಕ್ಕೂ ಬಾಲವಿಲ್ಲ. ಇದರ ಶಾಸ್ತ್ರೀಯ ಹೆಸರು ಪ್ಯಾನ್(Pan).
ಚಿಂಪಾಂಜಿ಼ಯ ಮುಖ, ಕಿವಿ, ಹಸ್ತ ಹಾಗೂ ಪಾದಗಳು ರೋಮರಹಿತ, ಮೈಯ ಮಿಕ್ಕ ಭಾಗದ ಮೇಲೆ ಒರಟಾದ, ಕಪ್ಪು ಬಣ್ಣದ ಕೂದಲುಗಳಿವೆ. ಮುಖದ ಬಣ್ಣ ಕಪ್ಪು ಇಲ್ಲವೆ ಕಂದು ಮಿಶ್ರಿತ ನಸುಗೆಂಪು. ಮೂಗು, ಕಿವಿ, ಕೈ ಹಾಗೂ ಪಾದಗಳು ಮಾತ್ರ ನಸುಗೆಂಪು ಮಾಂಸದ ಬಣ್ಣದವು. ಪೃಷ್ಠಭಾಗ ಮಾಸಲು ಬಿಳಿ ಬಣ್ಣಕ್ಕಿದೆ. ಚಿಂಪಾಂಜಿ಼ಯ ಮುಖ, ಉಳಿದ ವಾನರಗಳ ಮುಖಕ್ಕಿಂತ ಹೆಚ್ಚಾಗಿ ಮನುಷ್ಯ ಮುಖವನ್ನು ಹೋಲುತ್ತದೆ. ಹಣೆ ದೊಡ್ಡದು. ಕಣ್ಣುಗಳು ಚಿಕ್ಕವು. ಎದ್ದು ಕಾಣುವಂತೆ ಮುಂಚಾಚಿದ ಹುಬ್ಬಿನಿಂದಾಗಿ ಆಳವಾಗಿ ಹುದುಗಿದಂತಿವೆ. ಅವುಗಳ ಬಣ್ಣ ಮಾಸಲು ಕಂದು. ಮೂಗು ಅಗಲ ಹಾಗೂ ಚಪ್ಪಟೆ. ಮೂತಿ ಗುಂಡಗಿದೆ. ತುಟಿಗಳು ತೆಳುವಾಗಿರುವವಲ್ಲದೆ ಮುಂಚಾಚಿ ಕೊಂಡಿವೆ. ಹಲ್ಲುಗಳ ಸಂಖ್ಯೆ ಮಾನವನಲ್ಲಿರುವಂತೆಯೇ 32. ಕಿವಿಗಳು ದೊಡ್ಡ ಗಾತ್ರದವು. ಕಾಲುಗಳಿಗಿಂತ ಕೈಗಳು ಬಲು ಉದ್ದ. ಚಿಂಪಾಂಜಿ಼ ನಿಂತಾಗ ಅದರ ಮಂಡಿಗೂ ಕೆಳಗೆ ಜೋಲು ಬೀಳುತ್ತವೆ. ಕೈಯು ಇತರ ಬೆರಳುಗಳಿಗಿಂತ ಹೆಬ್ಬೆರಳು ಬಲುಮೋಟು. ಪಾದದಲ್ಲೂ ಹಸ್ತದಲ್ಲೂ ಹೆಬ್ಬೆರಳು ಉಳಿದ ಬೆರಳುಗಳಿಗೆ ಅಭಿಮುಖವಾಗಿದೆ. ಇದರಿಂದ ರೆಂಬೆಗಳನ್ನು, ಇತರ ವಸ್ತುಗಳನ್ನು ಹಿಡಿಯಲು ಅನುಕೂಲ.
ವಯಸ್ಕ ಚಿಂಪಾಂಜಿ಼ಯ ಎತ್ತರ 1-1.7 m. ತೂಕ 56-80 kg. ಹೆಣ್ಣುಗಳು ಗಂಡುಗಳಿಗಿಂತ ಚಿಕ್ಕವು.
ಚಿಂಪಾಂಜಿ಼ ಸಮಾಜಜೀವಿ. ಎರಡರಿಂದ ಇಪ್ಪತ್ತು ಪ್ರಾಣಿಗಳುಳ್ಳ ಗುಂಪು ಇಲ್ಲವೆ ಕುಟುಂಬಗಳಲ್ಲಿ ವಾಸಿಸುತ್ತದೆ. ಪ್ರತಿಗುಂಪಿಗೆ ಒಂದು ಬಲಿಷ್ಠ ಗಂಡು ನಾಯಕ. ಗುಂಪಿನ ಜವಾಬ್ದಾರಿಯೆಲ್ಲ ನಾಯಕ ಚಿಂಪಾಂಜಿ಼ಯದೇ ಆದರೂ ಗುಂಪಿನ ಆಗುಹೋಗುಗಳಿಗೆ ಪ್ರತಿಯೊಂದು ಸದಸ್ಯಪ್ರಾಣಿಯ ವೈಯಕ್ತಿಕ ನಿಷ್ಠೆಯೂ ಮುಖ್ಯ. ಪ್ರತಿಯೊಂದು ಗುಂಪಿಗೂ ಅದರದೇ ಆದ ಅಧೀನ ಪ್ರಾಂತ್ಯವಿರುತ್ತದೆ. ಇಂಥ ಪ್ರಾಂತ್ಯದ ವಿಸ್ತೀರ್ಣ ಸುಮಾರು 10 ಚದರ ಮೈಲಿಯಷ್ಟಿರಬಹುದು. ಚಿಂಪಾಂಜಿ಼ ಸಾಮಾನ್ಯವಾಗಿ ನೆಲದ ಮೇಲೇ ಕಾಲ ಕಳೆಯುವುದಾದರೂ ಹೆಚ್ಚುದೂರ ಪ್ರಯಾಣ ಮಾಡಬೇಕಾದಾಗ ಖುಷಿಯಾಗಿ ಮರದಿಂದ ಮರಕ್ಕೆ ಕೈಕಾಲುಗಳ ಸಹಾಯದಿಂದ ಜಿಗಿಯುತ್ತ, ತೊನೆಯುತ್ತ ಸಾಗುತ್ತದೆ. ನೆಲದಮೇಲೆ ನಡೆಯುವಾಗ ಕೈಲಾಲುಗಳೆರಡನ್ನೂ ಬಳಸುತ್ತದೆ. ಕಾಲುಗಳನ್ನು ಕೊಂಚಬಗ್ಗಿಸಿ, ದೇಹವನ್ನು ಸ್ವಲ್ಪ ಮುಂದಕ್ಕೆ ಬಾಗಿಸಿ ಕೈಬೆರಳುಗಳನ್ನು ಹಿಂದಕ್ಕೆ ಮಡಿಚಿಕೊಂಡು ನಡೆಯುವುದೇ ಸಾಮಾನ್ಯಕ್ರಮ, ಕೆಲವೊಮ್ಮೆ ಮನುಷ್ಯನಂತೆ ಬರಿಯ ಕಾಲುಗಳ ಮೇಲೆಯೇ ನಡೆಯುವುದುಂಟು. ಹೀಗೆ ನಡೆಯುವಾಗ ಪಾದಗಳನ್ನು ಅಡ್ಡಡ್ಡವಾಗಿ ಇಡುತ್ತದೆ. ಹಗಲೆಲ್ಲ ಆಹಾರವನ್ನು ಅರಸಿಕೊಂಡು ಸಂಚರಿಸುತ್ತಿದ್ದು ರಾತ್ರಿಯ ವೇಳೆಗೆ ಮರದಲ್ಲಿ ಸೊಪ್ಪುಸದೆಯ ಗೂಡುಗಳನ್ನು ನಿರ್ಮಿಸಿಕೊಂಡು ಗುಂಪಿನ ಎಲ್ಲ ಚಿಂಪಾಂಜಿ಼ಗಳೂ ಒಟ್ಟಿಗೆ ಮಲಗಿಬಿಡುತ್ತವೆ. ಹಗಲಿನಲ್ಲೂ ಇಂಥ ಗೂಡುಗಳನ್ನು-ಮರದ ಮೇಲೆ ಇಲ್ಲವೆ ನೆಲದ ಮೇಲೆ-ಕಟ್ಟಿಕೊಂಡು ಮಲಗಿ ವಿಶ್ರಮಿಸುವ ರೂಢಿ ಉಂಟು, ಕೆಲವು ಸಲ ಹೆಚ್ಚು ಬಿಸಿಲಿದ್ದರೆ ಗೂಡುಗಳ ಮೇಲೆ ಒಂದು ತೆರನ ಒರಟು ಚಾವಣಿಯನ್ನೂ ಕಟ್ಟುವುವು. ಸಾಮಾನ್ಯವಾಗಿ ರಾತ್ರಿಯೆಲ್ಲ ನಿದ್ದೆಯಲ್ಲೇ ಕಳೆಯುವುವಾದರೂ ಬೆಳದಿಂಗಳಿದ್ದರೆ ಎಚ್ಚರಗೊಂಡು ಏನಾದರೂ ಕಾರ್ಯನಿರತವಾಗಿರುವುದುಂಟು. ಬೆಳಗಿನ ಝಾವ ಎದ್ದು ಸೂರ್ಯ ಹುಟ್ಟಿದ ಎರಡು ಗಂಟೆಗಳವರೆಗೆ ಆಹಾರವನ್ನು ತಿನ್ನುತ್ತಿದ್ದು, ಅನಂತರ ತಿನ್ನುವುದನ್ನು ಕಡಿಮೆಮಾಡಿ, ಮಧ್ಯಾಹ್ನದ ವೇಳೆಗೆ ಕೊಂಚ ವಿಶ್ರಮಿಸಿಕೊಂಡು ಸಂಜೆ ಮತ್ತೊಮ್ಮೆ ಗಣನೀಯ ಪರಿಮಾಣದಲ್ಲಿ ಆಹಾರವನ್ನು ಸೇವಿಸಿ ರಾತ್ರಿಯ ಹೊತ್ತಿಗೆ ಮರವನ್ನೇರಿ ಮಲಗುವುದು ಇವುಗಳ ದಿನನಿತ್ಯದ ಕಾರ್ಯಕ್ರಮ. ಹಣ್ಣುಹಂಪಲು, ಚಿಗುರು, ಗೆಡ್ಡೆಗೆಣಸು ಮುಂತಾದವೇ ಚಿಂಪಾಂಜಿ಼ಗಳ ಪ್ರಧಾನ ಆಹಾರ, ಕೀಟಗಳನ್ನೂ ಹಕ್ಕಿಗಳ ಮೊಟ್ಟೆಗಳನ್ನೂ ತಿನ್ನುವುದಿದೆ. ಕೆಲವೊಮ್ಮೆ ಬುಶ್‍ಬಕ್ ಮುಂತಾದ ಜಿಂಕೆಗಳನ್ನು ಬೇಟೆಮಾಡಿ ತಿನ್ನುವುದುಂಟು.
ವೈದ್ಯಕೀಯ ಹಾಗೂ ಶರೀರ ವಿಜ್ಞಾನಗಳಲ್ಲಿ ಚಿಂಪಾಂಜಿ಼ಗೆ ಅತ್ಯಂತ ಶ್ರೇಷ್ಠ ಸ್ಥಾನವುಂಟು. ಕಾರಣ, ಇದು ಮನುಷ್ಯನಿಗೆ ಹತ್ತಿರ ಸಂಬಂಧಿಯಾಗಿರುವುದು. ಇದು ಮಂಗಗಳಿಗಿಂತ ಮನುಷ್ಯನಿಗೆ ಹತ್ತಿರ ಎನ್ನುವುದನ್ನು ತುಲನಾತ್ಮಕ ಅಂಗ ರಚನಾಶಾಸ್ತ್ರ, ಶರೀರ ವಿಜ್ಞಾನಶಾಸ್ತ್ರ ಮತ್ತು ಜೀವರಸಾಯನಶಾಸ್ತ್ರಗಳ ಸಂಶೋಧನೆಗಳಿಂದ ಶ್ರುತಪಡಿಸಲಾಗಿದೆ. ಇದರ ಕಂಕಾಲ ಮನುಷ್ಯನ ಕಂಕಾಲವನ್ನು ಹೋಲುವುದೂ ಈ ಅಭಿಪ್ರಾಯದ ಒಂದು ಮುಖ್ಯ ಆಧಾರಾಂಶವಾಗಿದೆ.
ಆಫ್ರಿಕದಲ್ಲಿ ಜೀವಿಸುವ ಒಂದು ವಾನರ. ಪ್ರೈಮೇಟ್ ಗಣದ ಹೊಮಿನಿಡೇ ಕುಟುಂಬಕ್ಕೆ ಸೇರಿದೆ. ಒರಾಂಗೂಟಾನ್, ಗಿಬ್ಬನ್, ಗೊರಿಲ್ಲಗಳ ಹತ್ತಿರ ಸಂಬಂಧಿ. ಅವುಗಳಂತೆಯೇ ಇದಕ್ಕೂ ಬಾಲವಿಲ್ಲ. ಇದರ ಶಾಸ್ತ್ರೀಯ ಹೆಸರು ಪ್ಯಾನ್(Pan).
ಪ್ಯಾನ್‍ನ ಹರಡುವಿಕೆ. ನೀಲಿ ಬಣ್ಣದಲ್ಲಿ ಸಾಮಾನ್ಯ ಚಿಂಪಾಂಜಿ಼ ಹಾಗೂ ಕೆಂಪು ಬಣ್ಣದಲ್ಲಿ ಬೊನೊಬೊ